ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಂಟ್ವಾಳ: ನಿರಾತಂಕ, ಶಾಂತ ಮತದಾನ

Vishwanath S
Updated On : 6 May 2013, 11:38 am

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ನಿರಾತಂಕವಾಗಿ ಮತದಾನ ನಡೆದಿತ್ತು. ಬೆಳಗ್ಗೆಯಿಂದಲೇ ಮತದಾರರು ತಂತಮ್ಮ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು ಮಧ್ಯಾಹ್ನ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಸುಮಾರು ಶೇ.50ರಷ್ಟು ಮತದಾನ ನಡೆದದ್ದು ಈ ಬಾರಿಯ ವಿಶೇಷ.
ವಿಳಂಬ: ತೊಡಂಬಿಲ ಸೇಕ್ರೇಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಬಂದಿದ್ದ ಮತದಾರರು ಕಾಯುವಂತಾಯಿತು. ಉಳಿದಂತೆ ಕೊಯಿಲ, ಕಾವಳಕಟ್ಟೆ, ವಗ್ಗ, ಮೂರ್ಜಿ ಮೊದಲಾದ ಮತಗಟ್ಟೆಗಳಲ್ಲಿ ಮತದಾನ ನಿಧಾನಗತಿಯಲ್ಲಿ ಆಗುತ್ತಿರುವ ಬಗ್ಗೆ ಪಕ್ಷಗಳ ಕಾರ್ಯಕರ್ತರಿಂದ ದೂರುಗಳು ಕೇಳಿಬಂತು. ಹಲವಾರು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ನೀಡುವ ಭಾವಚಿತ್ರವುಳ್ಳ ಬಿಎನ್‌ಎ ಚೀಟಿ ತಲುಪದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಬಳಿಕ ಬೇರೆ ಗುರುತಿನ ಚೀಟಿ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಚುನಾವಣಾ ಆಯೋಗ ನೀಡುವ ಚೀಟಿ ಇದ್ದರೂ ಕೆಲವೆಡೆ ಅಧಿಕಾರಿಗಳು ಬೇರೆಯೇ ಗುರುತಿನ ಚೀಟಿಯನ್ನು ಕೇಳಿದ್ದು ಇದರಿಂದಲೂ ಕೆಲವೆಡೆ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಮತದಾರರನ್ನು ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗವು ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ್ದು ಮತಗಟ್ಟೆಯಿಂದ 200 ಮೀಟರ್ ದೂರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಲಕ್ಷ್ಮಣ ರೇಖೆಯನ್ನು ಹಾಕಲಾಗಿತ್ತು. ಈ ಬಾರಿ ಕೇಂದ್ರ ಅರೆ ಸೈನಿಕ ಪಡೆಯನ್ನು ಬಂದೋಬಸ್ತಿಗೆ ನಿಯೋಜಿಸಲಾಗಿರುವುದರಿಂದ ಶಾಂತಿಯುತ ಮತದಾನ ನಡೆಯಲು ಸಹಕಾರಿಯಾಗಿತ್ತು.
ಕ್ಷೇತ್ರ ಪ್ರಮುಖರ ಮತ ಚಲಾವಣೆ: ಮಾಜಿ ಸಚಿವ ಜನಾರ್ದನ ಪೂಜಾರಿ ಬಂಟ್ವಾಳ ಎಸ್‌ವಿಎಸ್ ಹೈಸ್ಕೂಲ್, ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಮಾನಾಥ ರೈ ದಂಪತಿ ಸಹಿತ ಕಳ್ಳಿಗೆ ಗ್ರಾಮದ ತೊಡಂಬಿಲ ಶಾಲೆಯಲ್ಲಿ, ಕೆಜೆಪಿ ಅಭ್ಯರ್ಥಿ ಇಬ್ರಾಹಿಂ ಕೈಲಾರ್ ಇರ್ವತ್ತೂರು ಗ್ರಾಮದ ಮೂಡುಪಡುಕೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಗೋಳ್ತಮಜಲು ಪಂಚಾಯತ್ ಕಚೇರಿಯಲ್ಲಿ  ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದರು.

ತಮಗೇ ಮತದಾನ ಮಾಡಿಕೊಳ್ಳದವರು!
ಬಂಟ್ವಾಳದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮಂಗಳೂರು ಉತ್ತರ ಕ್ಷೇತ್ರಕ್ಕೊಳಪಟ್ಟ ಸೂರಲ್ಪಾಡಿ ಅಸರುದ್ದೀನ್ ಉರ್ದು ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದರೆ ಎಸ್‌ಡಿಪಿಐ ಅಭ್ಯರ್ಥಿ ಮಜೀದ್ ಖಾನ್ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಆರ್‌ಪಿಐ ಪಕ್ಷದ ಅಭ್ಯರ್ಥಿ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಚಲಾಯಿಸಿದರು. ವಿಶೇಷವೆಂದರೆ ಈ ಮೂವರು ಅಭ್ಯರ್ಥಿಗಳು ತಮಗೇ ತಮ್ಮ ಮತದಿಂದ ವಂಚಿತರಾಗಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಾದ ರಾಜೇಶ್ ನಾಯ್ಕ್ ಮತ್ತು ರಮಾನಾಥ ರೈ ಅವರು ಕ್ಷೇತ್ರದ ಪ್ರತಿ ಮತಗಟ್ಟೆಗೂ ತೆರಳಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಹುರುಪು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement