ಬೆಳ್ತಂಗಡಿ: 232 ಮತಗಟ್ಟೆಯಲ್ಲಿ ಬಿರುಸಿನ ಮತದಾನ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 232 ಮತಗಟ್ಟೆಗಳಲ್ಲಿ ಶಾಂತಿಯುತ ವಾತಾವರಣದಲ್ಲಿ ಮತದಾನದ ಪ್ರಕ್ರಿಯೆಗಳು ಸಂಪನ್ನಗೊಂಡವು. ಕ್ಷೇತ್ರದಲ್ಲಿ ಒಟ್ಟು ಶೇ 73.61 ಮತದಾನವಾಗಿದೆ.
ಬೆಳ್ತಂಗಡಿಯಲ್ಲಿ 1985ರಲ್ಲಿ ಶೇ.71.23, 1989 ರಲ್ಲಿ 74.14, 1994 ರಲ್ಲಿ 71.01, 1999ರಲ್ಲಿ 76.88 ಮತ್ತು 2008ರಲ್ಲಿ ಶೇ. 74.5 ಮತದಾನವಾಗಿತ್ತು. ಬೆಳಗ್ಗೆ ಸುಮಾರು 6.30ರಿಂದಲೇ ಅನೇಕ ಮತಗಟ್ಟೆಗಳಲ್ಲಿ ಜನ ಸಾಲು ನಿಂತಿರುವುದು ಕಂಡು ಬಂತು. ಡೈರಿಗೆ ಹಾಲು ಕೊಂಡುಹೋಗುವವರು ಮತ ಚಲಾಯಿಸಿಯೇ ಮನೆ ಕಡೆ ಹೋಗುವ ದೃಶ್ಯ ಅನೇಕ ಕಡೆ ಕಂಡು ಬಂತು. ಬೆಳ್ತಂಗಡಿಯ ಮತಗಟ್ಟೆಯೊಂದರಲ್ಲಿ ತುಂಬು ಗರ್ಭಿಣಿಯೊಬ್ಬರು 10 ಗಂಟೆ ಹೊತ್ತಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ನಂತರ ನೇರವಾಗಿ ಆಸ್ಪತ್ರೆಗೆ ತೆರಳಿದ್ದರು. ಅವರಿಗೆ ಬೆಳಗ್ಗೆ 11 ಗಂಟೆಗೆ ಹೆರಿಗೆಯಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದರು. ನಾಲ್ಕೂರು ಗ್ರಾಮದ ನಿಟ್ಟಡ್ಕ ಮತಗಟ್ಟೆಗೆ ವಿದ್ಯುತ್ ಕೊರತೆಯುಂಟಾಗಿ ಮತಗಟ್ಟೆ ಸಿಬ್ಬಂದಿ ವ್ಯವಸ್ಥೆ ಮಾಡಲು ತೊಡಕುಂಟಾಯಿತು. ಬಳಿಕ ನಾಗರಿಕರೊಬ್ಬರು ಶಾಲೆಯ ಮಾಡಿನ ಮೇಲೆ ಹತ್ತಿ ಹಂಚು ತೆಗೆದು ಸೂರ್ಯನ ಬೆಳಕನ್ನು ಒಳಗೆ ಬಿಡಲು ಅನುವಾದರು. ಆದರೆ ಕೆಲ ಹೊತ್ತಿನಲ್ಲಿ ವಿದ್ಯುತ್ ಬಂತು.
ಎಲ್ಲಾ ಕಡೆ ಚುನಾವಣಾ ಆಯೋಗದ ವತಿಯಿಂದ ಚೀಟು ಕೊಡಲು ವ್ಯವಸ್ಥೆ ಮಾಡಲಾಗಿತ್ತು. ನೇಮಿತ ಸಿಬ್ಬಂದಿ ಮೇಜು ಖುರ್ಚಿ ಹಾಕಿ ಕುಳಿತುಕೊಂಡಲ್ಲಿ ಪಕ್ಷದ ಕಾರ್ಯಕರ್ತರು ಸುಳಿದಾಡಿ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂತು.
ನಕ್ಸಲ್ ಬಾಧಿತ ದೂರದ ಒಳನಾಡು ಪ್ರದೇಶಗಳಲ್ಲಿರುವ 44 ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆಯಿಂದಲೇ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಎಲ್ಲಾ ಕಡೆ ಮಧ್ಯಾಹ್ನದವರೆಗೆ ಬಿರುಸಿನಿಂದ ಮತದಾನ ನಡೆಯಿತು.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಶಾಲೆಯಲ್ಲಿ, ಬಿಜೆಪಿ ಅಭ್ಯರ್ಥಿ ರಂಜನ್ ಗೌಡ ಬಂಗಾಡಿ ಶಾಲೆಯಲ್ಲಿ, ಶಾಸಕ ವಸಂತ ಬಂಗೇರ ಬೆಳ್ತಂಗಡಿ ಮಾದರಿ ಶಾಲೆ, ಮಾಜಿ ಶಾಸಕ ಪ್ರಭಾಕರ ಬಂಗೇರ ಕುವೆಟ್ಟು ಶಾಲೆಯಲ್ಲಿ ಮತ ಚಲಾಯಿಸಿದರು.