ವಿಠಲ ಸಿಪಿಎಂ ಏಜೆಂಟ್
ಮಂಗಳೂರು: ನಕ್ಸಲ್ ಪೀಡಿತ ಪ್ರದೇಶದ ಕುತ್ಲೂರು ಮತಗಟ್ಟೆಯಲ್ಲಿ ವಿಠಲ ಅವರು ಮಲೆಕುಡಿಯ ಸಿಪಿಎಂ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ.
ಮಂಗಳೂರು ವಿವಿಯಲ್ಲಿ ಎಂಸಿಜೆ ವಿದ್ಯಾರ್ಥಿಯಾಗಿರುವ ಅವರು, ನಕ್ಸಲ್ ನಂಟು ಆರೋಪದಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.
ಬಾಣಂತಿ: ಬೆಳ್ತಂಗಡಿಯ ನಾರಾವಿ ಮತಗಟ್ಟೆಯಲ್ಲಿ ಒಂದುವರೆ ತಿಂಗಳ ಮಗುವಿನ ಜತೆ ತಾಯಿ ಬಂದು ಮತದಾನ ಮಾಡಿ ಮಾದರಿಯಾದರು. ಇದೇ ವೇಳೆ ಶನಿವಾರ ಮದುವೆಯಾಗಿದ್ದ ವಧು ಕೂಡಾ ಮತದಾನ ಮಾಡಿ ಜಾಗೃತಿ ಪ್ರದರ್ಶಿಸಿದರು.
ರಸ್ತೆ ಬೇಕು: ಹೊಸಬೆಟ್ಟು ಪ್ರದೇಶದಿಂದ ಆಗಮಿಸಿದ ಸುಮಿತ್ರಾ ತಮ್ಮ ಊರಲ್ಲಿ ರಸ್ತೆ ಸರಿ ಇಲ್ಲ. ಗರ್ಭಿಣಿ, ಬಾಣಂತಿಯನ್ನು ಆಸ್ಪತ್ರೆಗೆ ಒಯ್ಯಬೇಕಾದರೆ ಎತ್ತಿಕೊಂಡೇ ಹೋಗಬೇಕು. ಮತದಾನ ಮಾಡಿದ್ದೇನೆ, ರಸ್ತೆ ದುರಸ್ತಿಯಾದರೆ ಸಂತೋಷ ಎಂದರು.
ಬಸ್ ಡಿಕ್ಕಿ: ರಿಕ್ಷಾ ಜಖಂ
ಮೂಲ್ಕಿ: ಪಡಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ನಾಡ್ನಿಂದ ಸುರತ್ಕಲ್ಗೆ ಕಲ್ಲಂಗಡಿ ಕೊಂಡೊಯ್ಯುತ್ತಿದ್ದ ಟೆಂಪೋ ರಿಕ್ಷಾಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ತಡೆ ರಹಿತ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದೆ. ರಿಕ್ಷಾದಲ್ಲಿದ್ದ ಕಲ್ಲಂಗಡಿ ರಸ್ತೆಗೆ ಬಿದ್ದು ಸುಮಾರು ರು. 15,000 ನಷ್ಟವಾಗಿದೆ.
ನಗದು ಸಹಿತ ಚಿನ್ನಾಭರಣ ಕಳವು
ಮೂಲ್ಕಿ: ಇಲ್ಲಿನ ಸಮೀಪದ ಹಳೆಯಂಗಡಿ ಸಾಗುವಿನ ರಮ್ಲ ಬೇಗಂ ಎಂಬವರ ಮನೆಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು, ನಗದು ಸಹಿತ ಚಿನ್ನಾಭರಣ ಕಳವು ಮಾಡಿದ್ದಾರೆ. ಮನೆಯ ಕಪಾಟಿನಲ್ಲಿದ್ದ ಮುಕ್ಕಾಲು ಪವನ್ನ ಚಿನ್ನದ 2 ರಿಂಗ್, 4 ಪವನ್ ಚಿನ್ನದ 2 ಬಳೆ ಮತ್ತು ರು. 25000 ನಗದು ಕಳ್ಳತನ ಮಾಡಿದ್ದು, ಮನೆಯವರು ಮೂಡಿಗೆರೆಗೆ ಹೋಗಿದ್ದು ಅವರ ತಂಗಿ ಭಾನುವಾರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಉಡುಪಿ: ಮಹಿಳೆಯೊಬ್ಬರು ಆಕಸ್ಮಿಕವಾಗಿ ಬೆಂಕಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕುಂಜಿಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತರು ಆಶಾ (38), ಅವರು ಶುಕ್ರವಾರ ಬೆಳಗ್ಗೆ ತಮ್ಮ ಮನೆಯ ಬಳಿ ಒಣಗಿದ ತರೆಗೆಲೆಗಳನ್ನು ಒಟ್ಟು ಮಾಡಿ ಬೆಂಕಿ ಹಾಕಿದ್ದರು. ಆಗ ಅವರದ್ದೇ ಮನೆಯ ನಾಯಿ ಅವರ ಮೈ ಮೇಲೆ ಹಾರಿದಾಗ ಆಯ ತಪ್ಪಿ ಬೆಂಕಿಯ ಮೇಲೆ ಬಿದ್ದರು. ಇದರಿಂದ ಅವರ ಬಟ್ಟೆ ಹಾಗೂ ಮೈಗೆ ಬೆಂಕಿ ತಗಲಿ ಸುಟ್ಟು ಹೋಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯ ವೆಚ್ಚ ಭರಿಸಲು ಆಗದೆ ಇದ್ದುದ್ದರಿಂದ ಅವರನ್ನು ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸಂಜೆ 3.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.