ಸುಳ್ಯ: ಉತ್ಸಾಹದಿಂದ ಮತ ಚಲಾವಣೆ
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ 219 ಮತ ಕೇಂದ್ರಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಎಲ್ಲ ಮತಕೇಂದ್ರಗಳಲ್ಲೂ ಮತದಾರರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡು ಬಂದಿದ್ದು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಸುಳ್ಯದ ಶಾರದಾ ಮಹಿಳಾ ಕಾಲೇಜಿನ ಮತಕೇಂದ್ರದಲ್ಲಿ ಮತದಾನಕ್ಕೆ ಆಗಮಿಸಿದ ವೃದ್ಧ ದಂಪತಿ ಅತಿ ಉದ್ದದ ಸರತಿ ಸಾಲಲ್ಲಿ ನಿಲ್ಲಲಾಗದೇ ಬಸವಳಿದು ಕುಳಿತ ದೃಶ್ಯ ಕಂಡು ಬಂತು. ಜಯನಗರ ಶಾಲಾ ಮತದಾನ ಕೇಂದ್ರದಲ್ಲಿ ಇಲಾಖೆಯ ವತಿಯಿಂದ ನೀಡಲಾಗುವ ಗುರುತು ಚೀಟಿಗಾಗಿ ಮತದಾರರು ಹುಡುಕಾಡಬೇಕಾಯಿತು. ಐವರ್ನಾಡು ಗ್ರಾಮದ ವಿವಿಧ ಮತಗಟ್ಟೆಗಳಲ್ಲಿ ಜೆಡಿಎಸ್ ವತಿಯಿಂದ ಮತದಾರರಿಗೆ ಬೆಲ್ಲ ಹಾಗೂ ಪಾನಕವನ್ನು ವಿತರಿಸಲಾಯಿತು.
ಅಭ್ಯರ್ಥಿಗಳಿಂದ ಮತದಾನ: ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ ದೊಡ್ಡತೋಟ ಶಾಲೆಯ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ನಂದರಾಜ್ ಸಂಕೇಶ್ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಮತದಾನ ಕೇಂದ್ರದಲ್ಲಿ ಮತಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಸುಳ್ಯ ವಿಧಾನಸಭಾ ಕ್ಷೇತ್ರದ ನೆಕ್ಕಿಲಾಡಿ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿನೇಶ್ ಬಿ.ಎನ್ ಸುಬ್ರಹ್ಮಣ್ಯದ ತನ್ನ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು.
ಮತದಾನಕ್ಕೆ ಬಿಗಿ ಭದ್ರತೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇರಳದ ಸರಹದ್ದನ್ನು ಹೊಂದಿರುವ ಮತ್ತು ನಕ್ಸಲ್ ಕಾರ್ತಕರ್ತರು ಭೇಟಿ ನೀಡಿದ ಪ್ರದೇಶಗಳು ಸೇರಿದಂತೆ ಎಲ್ಲ ಮತಗಟ್ಟೆಗಳಲ್ಲಿ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು.
ವೆಬ್ ಕಾಸ್ಟಿಂಗ್: ಈ ಸಲ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ 40 ವಿದ್ಯಾರ್ಥಿಗಳನ್ನು ಬಳಸಿಕೊಂಡು ವೆಬ್ ಕಾಸ್ಟಿಂಗ್ ಯೋಜನೆ ಅನುಷ್ಠಾನ ಮಾಡಲಾಯಿತು.