ಜಾತಿ ನಿಂದನೆ ದೂರು: ಕಣ್ಣೀರಿಟ್ಟ ಜಿಪಂ ಸದಸ್ಯೆ
ಸುಳ್ಯ: ಮರ್ಕಂಜದಲ್ಲಿ ಮತಯಾಚನೆಗೆ ಹೋದ ವೇಳೆ ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಜಿಪಂ ಸದಸ್ಯೆ ಸರಸ್ವತಿ ಕಾಮತ್ ಕಣ್ಣೀರಿಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ನನ್ನ ಮೇಲೆ ಜಾತಿ ನಿಂದನೆ ದೂರು ದಾಖಲಿಸಿದವರು ಯಾರೆಂದೇ ನನಗೆ ಗೊತ್ತಿಲ್ಲ. ಅವರಲ್ಲಿ ಮಾತನಾಡಿಯೂ ಇಲ್ಲ. ಕ್ಷೇತ್ರದಲ್ಲಿ ನನ್ನ ಏಳ್ಗೆ ಸಹಿಸದ ಬಿಜೆಪಿಯವರು ಇಂಥ ಅಮಾನವೀಯ ಕೃತ್ಯಕ್ಕೆ ಮುಂದಾಗಿದ್ದಾರೆ. ಸುಳ್ಳು ದೂರು ನೀಡಿದವರು ಹಾಗೂ ಇದಕ್ಕೆ ಕಾರಣರಾದ 15 ಮಂದಿಯ ಮೇಲೆ ಕಾನತ್ತೂರು ದೈವಸ್ಥಾನದ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದೇನೆ. ದೈವ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ' ಎಂದು ಗದ್ಗದಿತರಾದರು.
'ನಾನು ಹರೀಶ್ ಕೊಡಪಾಲರೊಂದಿಗೆ ಎನ್.ಎಸ್. ವೆಂಕಪ್ಪ ಗೌಡರ ಬೊಲೆರೋ ವಾಹನದಲ್ಲಿ ಕುದ್ಕುಳಿಯ ಅಂಗಡಿ ಬಳಿ ಬಂದಾಗ ಬಿಜೆಪಿಯವರು ಮಾರ್ಗಕ್ಕೆ ಅಡ್ಡವಾಗಿ ವಾಹನ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಮಹಿಳೆ ಎಂಬ ಕನಿಕರವೂ ಇಲ್ಲದೆ ಬಟ್ಟೆ ಬಿಚ್ಚಿ ಮಾನ ಹಾನಿ ಮಾಡಿದ್ದಾರೆ. ಈ ಕುರಿತು ದೂರು ನೀಡಲಾಗಿದೆ. ಇದಕ್ಕಾಗಿ ಅವರು ಸುಳ್ಳು ದೂರು ನೀಡಿದ್ದಾರಷ್ಟೆ' ಎಂದರು.
'ಈ ಘಟನೆ ಅಧಿಕಾರಿಗಳ ಎದುರೇ ನಡೆದಿದೆ. ಹೀಗಾಗಿ ಸತ್ಯ ಏನೆಂದು ಅವರಿಗೆ ತಿಳಿದಿದೆ. ಹೀಗಾಗಿ ನಾನು ಜಾಮೀನು ಪಡೆದುಕೊಳ್ಳಲು ಹೋಗುವುದಿಲ್ಲ. ನನಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವ ಬದಲು ಅವರ ಸುಳ್ಳು ದೂರಿಗೆ ನನ್ನನ್ನು ಬಂಧಿಸುವುದಿದ್ದರೆ ಬಂಧಿಸಲಿ' ಎಂದರು.