125ರಲ್ಲಿ 138 ಅಂಕ!
ವಿಶೇಷ ವರದಿ
ಉಡುಪಿ: ಶಿಕ್ಷಣ ಇಲಾಖೆಯ, ಪರೀಕ್ಷಾ ಮಂಡಳಿಯ ತಪ್ಪುಗಳು ಮುಗಿಯುವುದೇ ಇಲ್ಲ.. ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ 125 ಅಂಕಗಳಲ್ಲಿ 138 ಅಂಕಗಳು ದೊರೆತಿವೆ!
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಗ್ಲೆನಿಟಾ ರೀಮಾ ಪಿಂಟೊ (ಗಿಲ್ಬರ್ಟ್ ಪಿಂಟೊ - ಆಗ್ನೇಸ್ ಪಿರೇರಾ ಅವರ ಪುತ್ರಿ) ಮತ್ತು ಶೀತಲ್ ಲೀಷಾ (ರೇಂಜಲ್ ಸ್ಟ್ಯಾನಿ, ರೇಂಜಲ್ ಲ್ಲೀನಾ ನಜ್ರೆತ್ ದಂಪತಿ ಪುತ್ರಿ) ಈ ಹೆಚ್ಚುವರಿ ಅಂಕಗಳನ್ನು ಪಡೆದವರು.
ಈ ವಿದ್ಯಾರ್ಥಿನಿಯರು ಸೋಮವಾರ ಅಂತರ್ಜಾಲದಲ್ಲಿ ತಮ್ಮ ಫಲಿತಾಂಶ ನೋಡಿದಾಗ 'ಫಲಿತಾಂಶವನ್ನು ತಡೆಹಿಡಿಯಲಾಗಿದೆ' ಎಂಬ ಸಂದೇಶ ಸಿಕ್ಕಿತ್ತು. ಕಾರಣ ಇರಲಿಲ್ಲ, ಇದರಿಂದ ಇಬ್ಬರು ವಿದ್ಯಾರ್ಥಿಗಳ, ಅವರ ಹೆತ್ತವರ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು, ಭವಿಷ್ಯಕ್ಕೇನಾದರೂ ತೊಂದರೆಯಾಗುತ್ತದೆಯೇ ಎಂದು ಆತಂಕಗೊಂಡರು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಹೀಗಾದಾಗ ಅವರಿಗೆ ಹೇಗೆ ಸಾಂತ್ವನ ಹೇಳಬೇಕು ಎಂದು ಶಾಲೆಯ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ ಶಿಕ್ಷಕರಿಗೆ ತಿಳಿಯಲಿಲ್ಲ.
ಮಂಗಳವಾರ ಶಾಲೆಗೆ ಅಂಚೆ ಮೂಲಕ ಬಂದ ಫಲಿತಾಂಶದಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು. ತಡೆ ಹಿಡಿಯಲಾಗಿದ್ದ ಇಬ್ಬರ ಫಲಿತಾಂಶಗಳೂ ಅದರಲ್ಲಿತ್ತು. ಆದರೆ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ 125 ಅಂಕಗಳಲ್ಲಿ 138 ಅಂಕಗಳು ಮುದ್ರಿತವಾಗಿದ್ದವು.
ಪ್ರತಿಭಾನ್ವಿತ ವಿದ್ಯಾರ್ಥಿನಿ: ಗ್ಲೆನಿಟಾ ರೀಮಾ ಪಿಂಟೊ ಅವರಿಗೆ ಇಂಗ್ಲಿಷ್- 94, ಹಿಂದಿ- 99, ಗಣಿತ - 100, ವಿಜ್ಞಾನ- 96 ಮತ್ತು ಸಮಾಜ- 99 (ಒಟ್ಟು 5 ವಿಷಯಗಳಲ್ಲಿ 500ರಲ್ಲಿ 488). ಆಕೆಗೆ ಕನ್ನಡದಲ್ಲಿ 125ರಲ್ಲಿ 125 ಅಂಕ ಸಿಗುವ ವಿಶ್ವಾಸವೂ ಇತ್ತು. ಒಂದು ವೇಳೆ ಪರೀಕ್ಷಾ ಫಲಿತಾಂಶ ಸರಿಯಾಗಿ ಪ್ರಕಟವಾಗುತ್ತಿದ್ದರೆ ಆಕೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಐವರು ವಿದ್ಯಾರ್ಥಿಗಳಲ್ಲಿ ಇವಳಿಗೂ ಸ್ಥಾನ ಗ್ಯಾರಂಟಿ.
ಶೀತಲ್ ಲ್ಲೀಷಾ ರೇಂಜಲ್ ಫಲಿತಾಂಶವೂ ಇದೇ ರೀತಿ ಇದೆ. ಆಕೆಗೂ ಇಂಗ್ಲಿಷ್- 87, ಹಿಂದಿ- 95, ಗಣಿತ- 82, ವಿಜ್ಞಾನ - 74, ಸಮಾಜ- 94 ಅಂಕಗಳು ಬಂದಿವೆ. ಆದರೆ ಪರೀಕ್ಷಾ ಪಲಿತಾಂಶ ಪಟ್ಟಿಯಲ್ಲಿ ಒಟ್ಟು ಅಂಕಗಳ ಕಾಲಂ ಖಾಲಿ ಇದ್ದು, ಕೆಳಗೆ 'ಫಲಿತಾಂಶ ತಡೆಹಿಡಿಯಲಾಗಿದೆ' ಎಂದು ನಮೂದಿಸಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಬೆಂಗಳೂರು ಪರೀಕ್ಷಾ ಮಂಡಳಿಯನ್ನು ವಿಚಾರಿಸಿದಾಗ 'ಸ್ವಲ್ಪ ಕಾಯ್ರೀ, ಎಲ್ಲಾ ಸರಿ ಹೋಗುತ್ತೆ' ಎಂಬ ಸಿದ್ಧ ಉತ್ತರ ಬಂದಿದೆ. ಯಾವಾಗ ಸರಿಯಾಗುತ್ತೆ, ಅಲ್ಲಿವರೆಗೆ ವಿದ್ಯಾರ್ಥಿನಿಯರ ಮಾನಸಿಕ ಹಿಂಸೆಗೆ ಯಾರು ಹೊಣೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.