12ರಂದು ವಾರ್ಷಿಕೋತ್ಸವ
ಬೆಳ್ತಂಗಡಿ: ಶಿಬಾಜೆ ಗ್ರಾಮದ ಮೊಂಟೆತಡ್ಕ ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ಪ್ರಭಾತ ಯಕ್ಷಗಾನ ಸಂಘದ ವಾರ್ಷಿಕೋತ್ಸವ, ಶ್ರೀಕಂಠ ಸಪ್ತತಿ ಮತ್ತು ಯಕ್ಷಶ್ರೀ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಮೇ 12ರಂದು ನಡೆಯಲಿದೆ.
ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸ್ತ್ರೀ ಪಾತ್ರಧಾರಿ ಡಾ.ಕೊಳ್ಯೂರು ರಾಮಚಂದ್ರ ರಾವ್ ಅಭಿನಂದಿಸಲಿದ್ದಾರೆ. ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಚಾಲಕ ಶ್ರೀಕಂಠ ಭಟ್ ದಾಮಲೆ ಅವರಿಗೆ ಸನ್ಮಾನ ನಡೆಯಲಿದೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ಹೆಬ್ಬಾರ್ ವಹಿಸಲಿದ್ದು, ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ ಅತಿಥಿಯಾಗಿ ಹಾಜರಿರುತ್ತಾರೆ. ಬಳಿಕ ರಾತ್ರಿ 9.30ರಿಂದ ಸತ್ವ ಪರೀಕ್ಷೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
10ರಂದು ವ್ಯಾಪಾರಸ್ಥರ ಸಂಘ ಬಂದ್
ಬೆಳ್ತಂಗಡಿ: ಔಷಧ ಹಾಗೂ ಕಾಂತಿ ವರ್ಧಕ ಕಾಯ್ದೆ 1940ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 10ಕ್ಕೆ ಬಂದ್ ಕರೆ ನೀಡಿದ್ದು, ಅದನ್ನು ಬೆಳ್ತಂಗಡಿ ತಾಲೂಕು ಸಂಘವೂ ಬೆಂಬಲಿಸಲಿದೆ ಎಂದು ಸಂಘದ ಅಧ್ಯಕ್ಷ ಡಿ.ಜಗದೀಶ್ ತಿಳಿಸಿದ್ದಾರೆ.
ಶೇ. 100 ಫಲಿತಾಂಶ
ಸುಬ್ರಹ್ಮಣ್ಯ: 2012-13ನೇ ಸಾಲಿನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಹರಿಹರ ಪಲ್ಲತ್ತಡ್ಕದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ. ಇಲ್ಲಿ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. 26 ಮಂದಿ ಪ್ರಥಮ ದರ್ಜೆಯಲ್ಲಿ, 3 ಮಂದಿ ದ್ವಿತೀಯ ದರ್ಜೆಯಲ್ಲಿ, ತೃತೀಯ ದರ್ಜೆಯಲ್ಲಿ ಇಬ್ಬರು ಉತ್ತೀರ್ಣರಾಗಿದ್ದಾರೆ. ಗಾಯತ್ರಿ ಪಿ. (497), ಲಿಖಿನ್ ಕೆ.ಎನ್ (494) ಅಂಕ ಗಳಿಸಿ ಕಾಲೇಜಿಗೆ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಮಹಾಲಿಂಗೇಶ್ವರ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮ
ಪುತ್ತೂರು: ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ 15ರತನಕ ಪ್ರತಿದಿನ ರಾಷ್ಟ್ರೀಯ ರಾಜ್ಯ ಮಟ್ಟದ ಮತ್ತು ಸ್ಥಳೀಯ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವೀಂದ್ರ ಪಿ. ಮತ್ತು ಕಾರ್ಯದರ್ಶಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಯಕ್ರಮದ ಮುಖ್ಯ ವೇದಿಕೆಯಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ 2 ಗಂಟೆಯತನಕ ಹಾಗೂ ಮಧ್ಯಾಹ್ನ 3ರಿಂದ 5 ಗಂಟೆತನಕ ಸ್ಥಳೀಯ ಕಲಾವಿದರಿಂದ ಮತ್ತು ರಾತ್ರಿ ಗಂಟೆಯಿಂದ 10 ಗಂಟೆತನಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಭಕ್ತಿ ರಸಮಂಜರಿ, ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತ ನೃತ್ಯ ವೈಭವ, ಭರತ ನಾಟ್ಯ ಹಾಗೂ ತೆಂಕು ಹಾಗೂ ಬಡಗುತಿಟ್ಟಿನ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಧಾರ್ ದ್ವಿತೀಯ ಹಂತ ಪಾಲಿಕೆಗೆ ಸೀಮಿತ
ಮಂಗಳೂರು: ಇನ್ನು ಮುಂದೆ ಆಧಾರ್ ದ್ವಿತೀಯ ಹಂತದ ನೋಂದಾಣಿ ಕಾರ್ಯ ಮಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಜಿ.ಪಂ. ಸಿಇಒ ಡಾ. ವಿಜಯಪ್ರಕಾಶ್ ಸೂಚಿಸಿದ್ದಾರೆ. ಆದ್ದರಿಂದ ಲಾಲ್‌ಬಾಗ್, ಮಲ್ಲಿಕಟ್ಟೆ, ಕದ್ರಿ, ಕಾರ್ನಾಡ್ ಸದಾಶಿವ ರಾವ್ ಕಟ್ಟಡ ಮತ್ತು ಮಂಗಳೂರು ಪಾಲಿಕೆಯ ಸುರತ್ಕಲ್ ಉಪ ಕಚೇರಿ ಇಲ್ಲಿ ಮಾತ್ರ ಆಧಾರ್ ದ್ವಿತೀಯ ಹಂತದ ನೋಂದಾಣಿ ಕಾರ್ಯ ಮುಂದುವರಿಯಲಿದೆ. ಸಾರ್ವಜನಿಕರು ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ಶುಲ್ಕ ಪಾವತಿ
ಮಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 2013-14ನೇ ಸಾಲಿನ ಪ್ರಥಮ ಮತ್ತು ಅಂತಿಮ ಎಂಎ, ಎಂಕಾಂ ಪರೀಕ್ಷೆಗಳು ಜೂನ್, ಜುಲೈ ತಿಂಗಳಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ರು. 200 ದಂಡ ಶುಲ್ಕದೊಂದಿಗೆ ಪಾವತಿಸಲು ಮೇ. 8 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 0821-251994 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.