ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಟಿಎಂ ಹಣ ಹಾಕುವವರೇ ರು. 48.5 ಲಕ್ಷ ಎಗರಿಸಿದರು!

Vishwanath S
Updated On : 8 May 2013, 4:08 am

ಮಂಗಳೂರು: ಎಟಿಎಂಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸಂಸ್ಥೆ ಸಿಬ್ಬಂದಿಯೇ ರಾತ್ರಿ ವೇಳೆ ಸೀಕ್ರೆಟ್ ಲಾಕ್ ಉಪಯೋಗಿಸಿ ಎಂಟಿಎಂನಿಂದ ಹಣ ತೆಗೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನಂತೆ ಮಂಗಳೂರು ಮಂಗಳಾದೇವಿಯ ಗೌತಮ್ ಮತ್ತು ಅನಿಲ್‌ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
 ಇಬ್ಬರು ಆರೋಪಿಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಬೆಂಗಳೂರು ಗ್ಲೋಬಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸಿಬ್ಬಂದಿ. ಸಂಸ್ಥೆ ನಿಯಂತ್ರಣ ಕೇಂದ್ರ ಮುಂಬಯಿಯಲ್ಲಿದೆ. ಅಲ್ಲಿಂದ ಇಮೇಲ್ ಮೂಲಕ ಬ್ಯಾಂಕ್‌ಗೆ ಹಣ ತುಂಬಿಸುವ ಸೂಚನೆ ಬಂದ ತಕ್ಷಣ ಎಟಿಎಂಗೆ ಹಣ ತುಂಬಿಸಲಾಗುತ್ತದೆ. ಅದರಂತೆ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ವಾಹನಗಳಲ್ಲಿ ಸಾಗಿಸಿ ಎಟಿಎಂಗೆ ಹಣ ತುಂಬಿಸುತ್ತಾರೆ. ನಗರದಲ್ಲಿ ಐಸಿಐಸಿಐ ಬ್ಯಾಂಕ್‌ನ 15 ಎಟಿಎಂಗಳಿವೆ. ಗ್ಲೋಬಲ್ ಸಂಸ್ಥೆ 10 ತಿಂಗಳಿಂದ ಬ್ಯಾಂಕ್‌ಗಾಗಿ ಕೆಲಸ ಮಾಡುತ್ತಿದೆ.
ಈ ಖದೀಮರು ಎಟಿಎಂ ಹಣ ತುಂಬಿಸಿದ ಬಳಿಕ ರಾತ್ರಿ ವೇಳೆ ಕಾವಲುಗಾರರು ಇಲ್ಲದ ಎಟಿಎಗಳಿಗೆ ತೆರಳುತ್ತಾರೆ. ಅಲ್ಲಿನ ಸಿಸಿ ಕೆಮೆರಾ ಮೊದಲು ನಿಷ್ಕ್ರಿಯಗೊಳಿಸುತ್ತಾರೆ. ಬಳಿಕ ಸೀಕ್ರೆಟ್ ಲಾಕ್ ತೆಗೆದು 500 ಬಂಡಲ್‌ಗಳನ್ನೇ ಎಗರಿಸುತ್ತಿದ್ದರು. 10 ತಿಂಗಳಲ್ಲಿ 48.5 ಲಕ್ಷ ವಂಚಿಸಿದ್ದಾರೆ.
 ಲೆಕ್ಕಪರಿಶೋಧನೆ ವೇಳೆ ಅಂಕಿ ಅಂಶ ತಾಳೆಯಾಗದ ಕಾರಣ ಸಂಶಯ ಬಂದು ತನಿಖೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನಂತೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement