ಎಟಿಎಂಗೆ ಹಣ ಹಾಕುವವರೇ 48.5 ಲಕ್ಷ ಎಗರಿಸಿದರು!
ಕ.ಪ್ರ.ವಾರ್ತೆ ಟಿ ಮಂಗಳೂರು ಟಿ ಮೇ 7
ಎಟಿಎಂಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸಂಸ್ಥೆ ಸಿಬ್ಬಂದಿಯೇ ರಾತ್ರಿ ವೇಳೆ ಸೀಕ್ರೆಟ್ ಲಾಕ್ ಬಳಸಿ ಎಂಟಿಎಂನಿಂದ ಹಣ ತೆಗೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನಂತೆ ಮಂಗಳೂರು ಮಂಗಳಾದೇವಿಯ ಗೌತಮ್ ಮತ್ತು ಅನಿಲ್ರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳಿಗೆ ಕಳೆದ 10 ತಿಂಗಳಿನಿಂದ ಹಣ ತುಂಬಿಸುವ ಕೆಲಸ ಮಾಡುತ್ತಿರುವ ಬೆಂಗಳೂರು ಗ್ಲೋಬಲ್ ಮ್ಯಾನೇಜ್ಮೆಂಟ್ ಸಂಸ್ಥೆ ಸಿಬ್ಬಂದಿ. ಸಂಸ್ಥೆ ನಿಯಂತ್ರಣ ಕೇಂದ್ರ ಮುಂಬೈಯಲ್ಲಿದೆ.
ಅಲ್ಲಿಂದ ಇಮೇಲ್ ಮೂಲಕ ಬ್ಯಾಂಕ್ಗೆ ಹಣ ತುಂಬಿಸುವ ಸೂಚನೆ ಬಂದ ತಕ್ಷಣ ಎಟಿಎಂಗೆ ಹಣ ತುಂಬಿಸಲಾಗುತ್ತದೆ. ಅದರಂತೆ ಬ್ಯಾಂಕ್ನಿಂದ ಹಣ ಡ್ರಾ ಮಾಡಿ ವಾಹನಗಳಲ್ಲಿ ಸಾಗಿಸಿ ಎಟಿಎಂಗೆ ಹಣ ತುಂಬಿಸುತ್ತಾರೆ. ನಗರದಲ್ಲಿ ಐಸಿಐಸಿಐ ಬ್ಯಾಂಕ್ನ 15 ಎಟಿಎಂಗಳಿವೆ.
ಈ ಖದೀಮರು ಎಟಿಎಂ ಹಣ ತುಂಬಿಸಿದ ಬಳಿಕ ರಾತ್ರಿ ವೇಳೆ ಕಾವಲುಗಾರರು ಇಲ್ಲದ ಎಟಿಎಗಳಿಗೆ ತೆರಳುತ್ತಿದ್ದರು. ಮೊದಲು ಅಲ್ಲಿನ ಸಿಸಿ ಕ್ಯಾಮೆರಾವನ್ನು ನಿಷ್ಕ್ರಿಯಗೊಳಿಸಿ, ಬಳಿಕ ಸೀಕ್ರೆಟ್ ಲಾಕ್ ತೆಗೆದು 500 ಬಂಡಲ್ಗಳನ್ನೇ ಎಗರಿಸುತ್ತಿದ್ದರು. 10 ತಿಂಗಳಲ್ಲಿ 48.5 ಲಕ್ಷ ವಂಚಿಸಲಾಗಿದೆ.
ಲೆಕ್ಕಪರಿಶೋಧನೆ ವೇಳೆ ಅಂಕಿ ಅಂಶ ತಾಳೆಯಾಗದ ಕಾರಣ ಸಂಶಯ ಬಂದು ತನಿಖೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನಂತೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.