ಎಸ್‌ಎಸ್‌ಎಲ್ಸಿ: ಪುತ್ತೂರು ತಾಲೂಕಿಗೆ ಶೇ.76.05
ಪುತ್ತೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಒಟ್ಟು ಶೇ.76.05 ಫಲಿತಾಂಶ ಲಭ್ಯವಾಗಿದೆ.
ಪರೀಕ್ಷೆಗೆ 2795 ವಿದ್ಯಾರ್ಥಿಗಳು ಮತ್ತು 2721 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 5516 ಮಂದಿ ಹಾಜರಾಗಿದ್ದು, ಈ ಪೈಕಿ 1924 ವಿದ್ಯಾರ್ಥಿಗಳು ಮತ್ತು 2271 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. 871 ವಿದ್ಯಾರ್ಥಿಗಳು ಮತ್ತು 450 ವಿದ್ಯಾರ್ಥಿನಿಯರು ಅನುತ್ತೀರ್ಣಗೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ತಾಲೂಕಿನಲ್ಲಿ 146 ವಿದ್ಯಾರ್ಥಿಗಳು ಮತ್ತು 220 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 366 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. 667 ವಿದ್ಯಾರ್ಥಿಗಳು ಮತ್ತು 937 ವಿದ್ಯಾರ್ಥಿನಿಯರು- ಒಟ್ಟು 1604 ಮಂದಿ ಪ್ರಥಮ ಶ್ರೇಣಿ, 422 ವಿದ್ಯಾರ್ಥಿಗಳು ಮತ್ತು 516 ವಿದ್ಯಾರ್ಥಿನಿಯರು ಒಟ್ಟು 938 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 689 ವಿದ್ಯಾರ್ಥಿಗಳು ಮತ್ತು 598 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1287 ಮಂದಿ ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿಯರು ಒಟ್ಟು ಶೇ.83.64 ಫಲಿತಾಂಶ ಪಡೆದರೆ, ವಿದ್ಯಾರ್ಥಿಗಳು ಒಟ್ಟು ಶೇ.68.84 ಫಲಿತಾಂಶ ಪಡೆದುಕೊಂಡಿದ್ದಾರೆ.
ಶೇ.100 ಸಾಧನೆ: ತಾಲೂಕಿನ 16 ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿವೆ. ನೆಹರೂ ನಗರದ ಸುಧಾನ ಪ್ರೌಢಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ತ ವಿದ್ಯಾಲಯ, ಸವಣೂರಿನ ವಿದ್ಯಾರಾಶ್ಮಿ ವಿದ್ಯಾಲಯ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ, ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆ, ಕಡಬದ ಕ್ನನಾಯ ಜ್ಯೋತಿ ವಿದ್ಯಾಸಂಸ್ಥೆ ಮತ್ತು ಸಂತ್ಯನ್ ಪ್ರೌಢಶಾಲೆ, ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ, ಪಾಂಗಳಾಯಿಯ ಬೆಥನಿ ಪ್ರೌಢ ಶಾಲೆ, ಕೌಕ್ರಾಡಿಯ ಸಂತ ಜಾನ್ಸ್ ವಿದ್ಯಾಸಂಸ್ಥೆ, ಆತೂರಿನ ಆಯಿಷಾ ಪ್ರೌಢಶಾಲೆ, ಮರ್ದಾಳದ ಗುಡ್‌ಶೇಪರ್ಡ್ ವಿದ್ಯಾಸಂಸ್ಥೆ, ಈಶ್ವರಮಂಗಲದ ಶ್ರೀ ಗಜಾನನ ಪ್ರೌಢಶಾಲೆ, ಪಾಣಾಜೆಯ ಸುಬೋಧ ವಿದ್ಯಾಸಂಸ್ಥೆ, ಕುಂತೂರಿನ ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆ, ಮುರ ಕಬಕದ ಎಂಪಿಎಂ ವಿದ್ಯಾಲಯ ಪ್ರೌಢಶಾಲೆ ಶೇ. 100 ಫಲಿತಾಂಶ ಪಡೆದುಕೊಂಡಿವೆ. ಈ ಪೈಕಿ ನೆಹರೂ ನಗರದ ಸುಧಾನ ಪ್ರೌಢ ಶಾಲೆಯಲ್ಲಿ ಗರಿಷ್ಠ 81 ವಿದ್ಯಾರ್ಥಿಗಳಿದ್ದರೆ ಮುರ ಕಬಕದ ಎಂಪಿಎಂ ವಿದ್ಯಾಲಯ ಪ್ರೌಢಶಾಲೆಯಲ್ಲಿ ಕನಿಷ್ಠ 6 ವಿದ್ಯಾರ್ಥಿಗಳಿದ್ದಾರೆ.
ತಾಲೂಕಿನಲ್ಲಿ ಕನಿಷ್ಠ ಫಲಿತಾಂಶ: ಪಾಲ್ತಾಡಿ ಮಂಜುನಾಥ ನಗರದ ಸರ್ಕಾರಿ ಪ್ರೌಢಶಾಲೆಗೆ ಶೇ. 39.29 ಫಲಿತಾಂಶ ಲಭಿಸಿದ್ದು, ತಾಲೂಕಿನಲ್ಲಿ ಕನಿಷ್ಠ ಫಲಿತಾಂಶವಾಗಿದೆ. ಇಲ್ಲಿ ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳ ಪೈಕಿ 11 ಮಂದಿ ಉತ್ತೀರ್ಣರಾಗಿದ್ದಾರೆ. 17 ಮಂದಿ ಅನುತ್ತೀರ್ಣಗೊಂಡಿದ್ದಾರೆ.
ಉತ್ತಮ ಫಲಿತಾಂಶ- ಕ್ಷೇತ್ರ ಶಿಕ್ಷಣಾಧಿಕಾರಿ: ತಾಲೂಕಿನಲ್ಲಿ ಒಟ್ಟಾರೆಯಾಗಿ ಉತ್ತಮ ಫಲಿತಾಂಶ ಲಭ್ಯವಾಗಿದ್ದು, ಇದಕ್ಕೆ ಎಲ್ಲ ಶಾಲೆಗಳ ಮುಖ್ಯಗುರುಗಳ, ಸಹಶಿಕ್ಷಕರ ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ವಿಶೇಷ ಕಾಳಜಿಯೇ ಕಾರಣ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ತಿಳಿಸಿದ್ದಾರೆ.