ಸಂಪಾದನೆ ಪರಿಶುದ್ಧಗೊಳಿಸಲು ದೇವರಿಗೆ ಅರ್ಪಿಸಿ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಪುತ್ತೂರು: ದೈವಿಕ ಶಕ್ತಿ ಅತ್ಯಂತ ಜಾಗೃತವಾಗಿದ್ದು, ಮನುಷ್ಯರು ತಮ್ಮ ಸಂಪಾದನೆಯನ್ನು ಪರಿಶುದ್ಧಗೊಳಿಸಲು ಭಗವಂತನಿಗೆ ಅರ್ಪಣೆ ಮಾಡಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ದೇವರು ನೀಡಿದ ದೇಹದಿಂದ ಕರಸೇವೆ ಮಾಡುವ ಮೂಲಕ ದೇವರ ಸೇವೆಗೆ ಅರ್ಪಿಸಿರುವ ಭಕ್ತರಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗಿದೆ. ದೇವಳದಲ್ಲಿ ಮೂಡಿ ಬಂದಿರುವ ಕಾಷ್ಠ ಶಿಲ್ಪ ಮತ್ತು ಕೆತ್ತನೆ ಕೆಲಸದಲ್ಲಿ ಶಾಸ್ತ್ರಬದ್ಧವಾದ ಶಿಲ್ಪ ಸೌಂದರ್ಯ ಪ್ರಜ್ಞೆ ಮೂಡಿ ಬಂದಿದೆ ಎಂದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಜೊತೆ ಸೇರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವರ ಭಾವಚಿತ್ರದ ಚಿನ್ನದ ಪದಕವನ್ನು ಸುಬ್ರಹ್ಮಣ್ಯ ಮಠಾಧೀಶರು ದೇವಳದ ತಂತ್ರಿಗಳಾದ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಶಿಲಾಕಲಾ ಶರವು ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ನಮ್ಮ ಜೀವನ ಸಾರ್ಥಕವಾಗಲು ಇಂತಹ ಕ್ಷೇತ್ರಗಳ ಉದ್ಧಾರ ಕಾರ್ಯ ನಡೆಯಬೇಕು. ದೇವಸ್ಥಾನಗಳಲ್ಲಿ ಪೂಜೆ ನಿಂತು ಹೋದರೆ ಊರು ಹಾಳುಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ದೇವರ ಭಕ್ತಿಯು ಶಕ್ತಿಯಾಗಿ ನಮಗೆ ಫಲ ನೀಡುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಭಕ್ತಿ ಹೆಚ್ಚಾಗಬೇಕು ಎಂದರು. ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಮಾಜಿ ಮುಖ್ಯಮಂತ್ರಿ ಮತ್ತು ದೇವಳದ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಡಿ.ವಿ. ಸದಾನಂದ ಗೌಡ, ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ವಾಸ್ತು ತಜ್ಞ ಮುನಿಯಂಗಳ ಎಸ್.ಎಂ. ಪ್ರಸಾದ್, ನಿವೃತ್ತ ತಹಾಸೀಲ್ದಾರ್ ಸಿ.ಎಚ್. ಕೋಚಣ್ಣ ರೈ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರರು ಇದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದೇವಳದ ಕಾರ್ಯನಿವಣಹಣಾಧಿಕಾರಿ ಸಿ.ಯು. ಪೂವಪ್ಪ ವಂದಿಸಿದರು.