ಅಭ್ಯರ್ಥಿ ಆಯ್ಕೆಯಲ್ಲಿ ನನ್ನ ಪಾತ್ರವೇ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಬಿಜೆಪಿ ವಿಚಾರದಲ್ಲಿ ಆರೆಸ್ಸೆಸ್ ಹಸ್ತಕ್ಷೇಪ ಮಾಡಿಲ್ಲ ಎಂದು ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ. ಬುಧವಾರ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಅವರು ತಾನು ಯಾವುದೇ ಅಭ್ಯರ್ಥಿಯನ್ನು ಸ್ಪರ್ಧೆಗೆ ನಿಲ್ಲಿಸಲು ಸೂಚಿಸಿಲ್ಲ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೇ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ತನ್ನ ಕುರಿತಾದ ಹಸ್ತಕ್ಷೇಪ ಆರೋಪ ಸತ್ಯಕ್ಕೆ ದೂರ ಎಂದರು. ರಾಜ್ಯ ಬಿಜೆಪಿಯಲ್ಲಿನ ಗಲಾಟೆ, ಗೊಂದಲ ಕಾರಣಕ್ಕೆ ಜನತೆ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಮತದಾರರು ಬುದ್ಧಿವಂತರು, ಬಿಜೆಪಿ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಮಾಧ್ಯಮಗಳು ಬಿಜೆಪಿ ವಿರುದ್ಧ ಪ್ರಚಾರ ಮಾಡಿರುವುದೂ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಿದ ಅವರು, ಕಾಂಗ್ರೆಸ್‌ನ ರಮಾನಾಥ ರೈ ಅಲ್ಪಸಂಖ್ಯಾತರನ್ನು ಓಲೈಸಲು, ಜಾತಿ ಸಮುದಾಯದ ಹಿತಚಿಂತಕ ಎಂದು ಬಿಂಬಿಸಲು ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ಬದಲು ತನ್ನ ವಿರುದ್ಧ ಸ್ಪರ್ಧೆ ಎಂದು ಹೇಳಿದ್ದಾರೆ. ಅದು ಅವರ ರಾಜಕೀಯ ತಂತ್ರಗಾರಿಕೆಯ ಭಾಗ ಅಷ್ಟೇ ಎಂದರು. ಜಿಲ್ಲೆಯಲ್ಲಿ ಬಿಜೆಪಿ ಗೆಲವಿಗೆ ಸಂಘಪರಿವಾರ ಶ್ರಮಿಸಿದೆ. ಆದರೆ ಕಾಂಗ್ರೆಸ್‌ನವರು ವ್ಯಾಪಕವಾಗಿ ಹಣ ಹಂಚಿದ್ದರಿಂದ ಬಿಜೆಪಿಗೆ ಸೋಲುಂಟಾಗಿದೆ. ಸೋಲಿಗೆ ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳಲಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಸೋಲು ಗೆಲವು ಇದ್ದದ್ದೇ ಎಂದು ವ್ಯಾಖ್ಯಾನಿಸಿದ್ದಾರೆ ಪ್ರಭಾಕರ ಭಟ್.