ಎರಡು ಕಡೆ ಸಂಸಾರ: ಹಣಕಾಸು ಮುಗ್ಗಟ್ಟಿಂದ ಆತ್ಮಹತ್ಯೆ
ಮಂಗಳೂರು: ಎರಡು ಮದುವೆಯಾಗಿ ಸಂಸಾರ ಸರಿದೂಗಿಸಲು ಸಾಧ್ಯವಾಗದೆ ಕಾರು ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಾರು ನಿವಾಸಿ ರವಿಪ್ರಸಾದ್ (29) ಆತ್ಮಹತ್ಯೆ ಮಾಡಿಕೊಂಡವರು. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 9 ತಿಂಗಳ ಹಿಂದೆ ನರ್ಸ್ ಒಬ್ಬರನ್ನು ಮದುವೆಯಾಗಿದ್ದರು. ಸಂಸಾರ ನಿರ್ವಹಣೆಗೆ ಎಂದು ಕಾರು ಖರೀದಿಸಿದ್ದರು. ಕಾರ್ ಖರೀದಿಗೆ ಸಾಲ ಇತ್ತು. ಎರಡು ಸಂಸಾರ ತೂಗಿಸಲು ಅನೇಕ ಕಡೆ ಸಾಲ ಮಾಡಿದ್ದರು. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕೋರ್ಟ್‌ನಲ್ಲಿ ವಿಚಾರಣೆ ಕೂಡಾ ನಡೆಯುತ್ತಿತ್ತು. ಇದಕ್ಕೂ ಹಣ ಬೇಕಾಗಿತ್ತು. ಇದರಿಂದ ನೊಂದ ಅವರು ಸೋಮವಾರ ಸಂಜೆ ಕೊಣಾಜೆಯಲ್ಲಿ ತಾನು ಖರೀದಿಸಿದ ಕಾರಿನಲ್ಲಿಯೇ ಕೀಟನಾಶಕ ಸೇವಿಸಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಮಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಂದೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.