ಗ್ರಾಮಾಂತರದಲ್ಲಿ ಕೈಗೆ ಸೈ, ಸುಳ್ಯದಲ್ಲಿ ಮುದುಡದ ತಾವರೆ
ಮಂಗಳೂರು: ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯದ ಕೈ ಎತ್ತಿದರೆ, ಸುಳ್ಯದಲ್ಲಿ ಬಿಜೆಪಿ ತಾವರೆ ಮುದುಡಿಲ್ಲ.
ಗ್ರಾಮಾಂತರ ಪ್ರದೇಶದ ಜನರೂ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದು ಸುಳ್ಯದಲ್ಲಿ ಮಾತ್ರ ಕೂದಲಂತರದಿಂದ ಬಿಜೆಪಿ ಸ್ಥಾನವನ್ನು ಉಳಿಸಿಕೊಂಡಿದೆ. ಬೆಳ್ತಂಗಡಿಯಲ್ಲಿ ಹಾಲಿ ಶಾಸಕರಾದ ವಸಂತ ಬಂಗೇರ, ಬಂಟ್ವಾಳದಲ್ಲಿ ರಮಾನಾಥ ರೈ, ಪುತ್ತೂರಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗೆಲವು ಕಂಡಿದ್ದಾರೆ. ಸುಳ್ಯದಲ್ಲಿ ಶಾಸಕ ಅಂಗಾರ ಗೆಲವಿನ ನಗು ಬೀರಿದ್ದಾರೆ.
ಮಾಜಿ ಸಿಎಂ ಡೀವಿ ಮುಖಭಂಗ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ವಕ್ಷೇತ್ರ ಪುತ್ತೂರಿನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿಗೆ ಇಲ್ಲಿ ಅನಿರೀಕ್ಷಿತ ಹಿನ್ನಡೆ. 2008 ಚುನಾವಣೆಯಲ್ಲಿ ಟಿಕೆಟ್ ಸಿಗದೆ ಸ್ವಾಭಿಮಾನಿ ವೇದಿಕೆ ರಚಿಸಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದ ಶಕುಂತಳಾ ಶೆಟ್ಟಿ, 2013ರ ಚುನಾವಣೆ ಘೋಷಣೆ ವೇಳೆಗೆ ಕಾಂಗ್ರೆಸ್ ಸೇರಿದ್ದರು. ಕೊನೆಗಳಿಗೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿ 4,289 ಮತ ಅಂತರದಲ್ಲಿ ಬಿಜೆಪಿಯನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ. ಇದರೊಂದಿಗೆ 19 ವರ್ಷ ಬಳಿಕ ಪುತ್ತೂರಿನಲ್ಲಿ ಕಾಂಗ್ರೆಸ್ ಅಧಿಕಾರವನ್ನು ಮರಳಿ ಪಡೆದಂತಾಗಿದೆ. ಇಲ್ಲಿ ಬ್ರಾಹ್ಮಣ ಮತಗಳು ನಿರ್ಣಾಯಕವಾಗಿದ್ದರೆ, ಜೆಡಿಎಸ್ ಗಳಿಸಿದ ಮತ ಬಿಜೆಪಿ ಸೋಲಿಗೆ ಕಾರಣವಾಗಿದೆ.
'ಮಾಜಿ ಸಿಎಂ ಡೀವಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆ ಏನೂ ಹೇಳುವುದಿಲ್ಲ. ಹಿರಿಯರಾದ ರಾಮಭಟ್ರ ಆಶೀರ್ವಾದ, ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಪರಿಶ್ರಮದಿಂದ ಗೆಲವು ಸಾಧ್ಯವಾಗಿದೆ. ನಾವು ಯಾರ ವಿರೋಧಿಗಳೂ ಅಲ್ಲ, ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇನೆ. ಮೂಲಸೌಕರ್ಯಕ್ಕೆ ಒತ್ತು ನೀಡಲಿದ್ದು, ಕ್ಷೇತ್ರದಲ್ಲಿ ಶಾಂತಿ, ಸಾಮರಸ್ಯಕ್ಕೆ ಆದ್ಯತೆ ನೀಡುತ್ತೇನೆ' ಎಂದು ಶಕುಂತಳಾ ಶೆಟ್ಟಿ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕಲ್ಲಡ್ಕ ವಿರುದ್ಧ ರೈ ಗೆಲವು!: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರಮಾನಾಥ ರೈ ಬಂಟ್ವಾಳದಲ್ಲಿ 6ನೇ ಬಾರಿ ಗೆಲವು ಸಾಧಿಸಿದ್ದಾರೆ. ತನ್ನ ಸ್ಪರ್ಧೆ ಬಿಜೆಪಿ ಅಭ್ಯರ್ಥಿ ರಾಜೇಶ್ ನೈಕ್ ವಿರುದ್ಧ ಅಲ್ಲ, ಬದಲಾಗಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಂದು ಗುಡುಗಿದ್ದರು ರಮಾನಾಥ ರೈ. 17,850 ಮತ ಅಂತರದಲ್ಲಿ ಗೆಲವು ಸಾಧಿಸಿದ್ದು, ಕ್ಷೇತ್ರದಲ್ಲಿ ತಾನಿನ್ನೂ ಜನಪ್ರಿಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಮಾನಾಥ ರೈ ಸೋಲಿಗೆ ಭೀತಿ ಒಡ್ಡಿದ್ದ ಎಸ್ಡಿಪಿಐ 6,112 ಮತ ಬಾಚಿದೆ. ಬಿಜೆಪಿ ಹೊಸ ಮುಖವನ್ನು ಪರಿಚಯಿಸಿದ್ದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
'ಬಿಜೆಪಿಯ ಘಟಾನುಘಟಿಗಳು ಬಂಟ್ವಾಳದಲ್ಲಿ ಇದ್ದರೂ ಕಾಂಗ್ರೆಸ್ಗೆ ಗೆಲವಾಗಿರುವುದು ತನ್ನ ಶುದ್ಧ ಚಾರಿತ್ರ್ಯ ರಾಜಕಾರಣಕ್ಕೆ ಸಂದ ಜಯ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಲಿದ್ದು, ನೇತ್ರಾವತಿ ನದಿ ತಿರುವಿಗೆ ವಿರೋಧವಿದ್ದು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದ್ದೇವೆ' ಎನ್ನುತ್ತಾರೆ ರಮಾನಾಥ ರೈ.
ಡಿಸಿಸಿ ಅಧ್ಯಕ್ಷತೆಗೆ ಗುಡ್ಬೈ: ಬಿಜೆಪಿ ಮತ್ತು ಎಸ್ಡಿಪಿಐ ಮಧ್ಯೆ ಒಳಒಪ್ಪಂದವಾಗಿದ್ದು, ಬಿಜೆಪಿಯವರೇ ಅವರಿಗೆ ಹಣ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಅನೇಕ ಕೆಲಸಗಳು ಆಗಬೇಕಿರುವುದರಿಂದ ತಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಯಲ್ಲಿ ಮುಂದುವರಿಯುವುದಿಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಬಂಗೇರ ಸಾಮರ್ಥ್ಯ ಪ್ರದರ್ಶನ: ಬೆಳ್ತಂಗಡಿಯಲ್ಲಿ ಅನಾರೋಗ್ಯ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿ, ಮತ್ತೆ ಸೆಟೆದು ನಿಂತ ಶಾಸಕ ವಸಂತ ಬಂಗೇರ ಎರಡನೇ ಅವಧಿಗೆ ಕಾಂಗ್ರೆಸ್ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ತಂದೆ ಮಾಜಿ ಸಚಿವ ಗಂಗಾಧರ ಗೌಡ ಜತೆ ರಂಜನ್ ಗೌಡ ಬಿಜೆಪಿಗೆ ಬಂದಿದ್ದರು. ಅವರಿಗೆ ಟಿಕೆಟ್ ನೀಡಿದ್ದು ಬಿಜೆಪಿಯ ಆಂತರಿಕ ಬೇಗುದಿಗೆ ಕಾರಣವಾಗಿತ್ತು. ಇಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಶಾಶ್ವತ ಪ್ಯಾಕೆಜ್ ಸಿಕ್ಕಿಲ್ಲ ಎಂದು ಅಸಮಾಧಾನ ತೋರ್ಪಡಿಸಿದ್ದರೆ, ವಸಂತ ಬಂಗೇರರ ಕಾರ್ಯಕರ್ತರ ಒಡನಾಟ ಅವರನ್ನು ಗೆಲ್ಲಿಸಿದೆ.
'ನಮ್ಮಲ್ಲಿ 43 ಗ್ರಾಮ ಪಂಚಾಯ್ತಿ ಮತ್ತು ಒಂದು ಪಟ್ಟಣ ಪಂಚಾಯ್ತಿ ಇದ್ದು, ಎಲ್ಲರಿಗೆ ಮೂಲಸೌಕರ್ಯ, ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ' ಎನ್ನುತ್ತಾರೆ ವಸಂತ ಬಂಗೇರ.
ಬದಲಾಗದ ಸುಳ್ಯ: ಸುಳ್ಯದಲ್ಲಿ 5ನೇ ಬಾರಿಗೆ ಬಿಜೆಪಿಯ ಅಂಗಾರ ಗೆಲವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಬಹಳ ಜಿದ್ದಾಜಿದ್ದಿಯ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ವಿರುದ್ಧ ಅಂಗಾರ ಅಂತಿಮ ಕ್ಷಣದಲ್ಲಿ 1,373 ಮತ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ. ಮುಖ್ಯವಾಗಿ ತಮಿಳು ಲಂಕಾ ನಿರಾಶ್ರಿತರಿಗೆ ಜಾತಿ ದೃಢಪತ್ರ ನೀಡಿಕೆಯಲ್ಲಿ ಅಂಗಾರ ಏನೂ ಪ್ರಯತ್ನ ಮಾಡಿಲ್ಲ ಎಂಬ ಅಸಮಾಧಾನ ಇತ್ತು. ಜತೆಗೆ ಜೆಡಿಎಸ್, ಕಾಂಗ್ರೆಸ್ ಪ್ರಬಲ ಹೊಡೆತವನ್ನು ನಿರೀಕ್ಷಿಸಲಾಗಿತ್ತು. ಕಳೆದ ಸಲಕ್ಕಿಂತ ಈ ಬಾರಿ ಶೇಕಡಾವಾರು ಮತದಾನ ಕಡಿಮೆಯಾದ್ದರಿಂದ ಅನಿರೀಕ್ಷಿತ ಫಲಿತಾಂಶದ ಲೆಕ್ಕಾಚಾರ ಹಾಕಲಾಗಿತ್ತು. ಕೆಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರರಾಗಿ ಸ್ಪರ್ಧಿಸಿದ ಮಾಜಿ ಶಾಸಕ ಕುಶಲ ಕೇವಲ 705 ಮತ ಪಡೆದು ಠೇವಣಿ ಕಳಕೊಂಡಿದ್ದಾರೆ. ಈ ಫಲಿತಾಂಶ ಜಿಲ್ಲೆಯಲ್ಲಿ ಬಿಜೆಪಿಯ ಮಾನ ಉಳಿಸಿದ್ದರೂ, ಮುಂದಿನ ಚುನಾವಣೆಗೆ ಬಿಜೆಪಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ.
'ಕಳೆದ 60 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯ ಕ್ಷೇತ್ರದಲ್ಲಿ ಮಾಡಲಾಗಿದೆ. ಹಾಗಾಗಿ ಜನತೆ ಬಿಜೆಪಿಯನ್ನು ಕೈಬಿಟ್ಟಿಲ್ಲ. ಕಾಂಗ್ರೆಸ್ನವರು ಮತದಾರರನ್ನು ಓಲೈಸಲು ಮದ್ಯ ಬಾಟಲಿ ಹಂಚಿದ್ದು ಗೆಲವಿನ ಅಂತರ ಕಡಿಮೆಗೆ ಕಾರಣ. ಲಂಕಾ ನಿರಾಶ್ರಿತರಿಗೆ ಜಾತಿದೃಢಪತ್ರಕ್ಕೆ ಪ್ರಯತ್ನಿಸುತ್ತೇನೆ' ಎನ್ನುತ್ತಾರೆ ಅಂಗಾರ.
- ಆತ್ಮಭೂಷಣ್