ಸೇಡಿನ ರಾಜಕಾರಣವಿಲ್ಲ: ಶಕುಂತಳಾ
ಪುತ್ತೂರು: ಜನ ಸೇವೆಗಾಗಿ ಮತದಾರರು ತನ್ನನ್ನು ವಿಧಾನಸಭೆಗೆ ಕಳುಹಿಸಿದ್ದು, ತಾನು ಯಾವುದೇ ಕಾರಣಕ್ಕೂ ಸೇಡಿನ ರಾಜಕೀಯದಲ್ಲಿ ತೊಡಗುವುದಿಲ್ಲ. ಬಡವರ, ಕಾರ್ಮಿಕರ, ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ. ಅಭಿವೃದ್ಧಿ ಕಾರ್ಯ ನನ್ನ ಮುಖ್ಯ ಗುರಿ ಎಂದು ಪುತ್ತೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಗೊಂಡ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಶಾಸಕಿಯಾಗಿ ಆಯ್ಕೆಯಾದ ಬಳಿಕ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ಕೇಂದ್ರ ಜುಮ್ಮಾ ಮಸೀದಿ ಮತ್ತು ಮೈದೇದೇವುಸ್ ಚರ್ಚ್ಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ಗೆ ಮಾತ್ರ ಶಾಸಕಿಯಲ್ಲ: ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಿದ್ದು, ವಿಧಾನಸಭೆ ಪ್ರವೇಶಿಸಲು ಮತದಾರರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಗೆಲವು ಸಾಧಿಸಿದ ಕಾರಣ ನಾನು ಕೇವಲ ಕಾಂಗ್ರೆಸಿಗೆ ಮಾತ್ರ ಶಾಸಕಿಯಲ್ಲ. ಈ ಕ್ಷೇತ್ರದ ಎಲ್ಲ ಜನತೆಯ ಜನಪ್ರತಿನಿಧಿ. ಆದ್ದರಿಂದ ಜನತೆಯ ಪ್ರೀತಿ- ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದೇ ನನ್ನ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಶಕುಂತಳಾ ಶೆಟ್ಟಿ ತನ್ನ ರಾಜಕೀಯ ಗುರು ಮಾಜಿ ಶಾಸಕ ಕೆ. ರಾಮ ಭಟ್ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಂಡರು.