ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸೋನಿಯಾ ಮೇನಿಯಾ: ನಡೆಯದ ಮೋದಿ ಮೋಡಿ

Lingaraj Badiger
Updated On : 9 May 2013, 11:50 am

- ಜಿತೇಂದ್ರ ಕುಂದೇಶ್ವರ
ಮಂಗಳೂರು:
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳೂರಲ್ಲಿ ಪ್ರಚಾರ ನಡೆಸಿದ್ದರು. ಸುಷ್ಮಾ ಸ್ವರಾಜ್ ಪತ್ರಿಕಾಗೋಷ್ಠಿ ನಡೆಸಿದ್ದರು. ಪರಿಣಾಮ ಮಂಗಳೂರು ತಾಲೂಕಿನ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಅಭ್ಯರ್ಥಿಗಳು ಗೆದ್ದು ದಾಖಲೆ ಮಾಡಿದರು! ಜಿಲ್ಲೆಯಲ್ಲಿ 7 ಸ್ಥಾನ ಕಾಂಗ್ರೆಸ್ ಬಾಚಿದರೆ, ಒಂದೇ ಒಂದು ಸ್ಥಾನ ಬಿಜೆಪಿಗೆ ಲಭಿಸಿದೆ.
 ಕಳೆದ ಅಕ್ಟೋಬರ್‌ನಲ್ಲಿ ಸೋನಿಯಾ ಗಾಂಧಿ ಮಂಗಳೂರಿನ ದಸರಾ ಕಾರ್ಯಕ್ರಮಕ್ಕೆ ಆಗಮಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಗಾದಿಗೆ ಹೋರಾಡದೆ ಒಗ್ಗಟ್ಟಿನಿಂದ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವಂತೆ ಕರೆ ನೀಡಿದ್ದರು. ಬಳಿಕ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿತ್ತು. ಇದಾದ ಬಳಿಕ ಮತ್ತೊಮ್ಮೆ ಮಂಗಳೂರಿಗೆ ಆಗಮಿಸಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರಗಳ ಬಗ್ಗೆ, ಕೇಂದ್ರ ಅನುದಾನಗಳನ್ನು ಬಳಸಿಕೊಳ್ಳದೆ, ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. 'ಈಡೇರಿಸಲಾಗದ ಭರವಸೆ ಏಕೆ ನೀಡುತ್ತೀರಿ' ಎಂದು ಬಿಜೆಪಿಯನ್ನು ಟೀಕಿಸಿದ್ದರು.
 ಸೋನಿಯಾ ಗಾಂಧಿ ಆಗಮನದಿಂದ ಮತದಾರರ ಮೇಲೆ ನೇರ ಪರಿಣಾಮ ಬೀರುವುದಕ್ಕಿಂತಲೂ ಹೆಚ್ಚಾಗಿ ಸ್ಥಳೀಯ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಹುರುಪು ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಯಿತು. ಸೋನಿಯಾ ಆಗಮನ ಬಳಿಕ ಕಾಂಗ್ರೆಸ್ ಪ್ರಚಾರ ಸಿಕ್ಕಾಪಟ್ಟೆ ಝೂಮ್‌ನಲ್ಲಿತ್ತು. ನರೇಂದ್ರ ಮೋದಿ ಮಂಗಳೂರಲ್ಲಿ ಅಭಿವೃದ್ಧಿ ಕೇಂದ್ರೀಕರಿಸಿ ಮಾತನಾಡಿದರು, ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು. ಅಕ್ಕನನ್ನು ಕೊಟ್ಟು ಕೆಟ್ಟ ಬಳಿಕ ತಂಗಿಯನ್ನು ಕೊಡಲು ಮನಸ್ಸಾದರೂ ಬಂದೀತೆ ಎಂದು ಪ್ರಶ್ನಿಸಿದ್ದರು. ಗೋಮಾಂಸ ರಫ್ತು ಮಾಡುವ ಕೇಂದ್ರ ಸರ್ಕಾರದ ಪಿಂಕ್ ಕ್ರಾಂತಿ ಬಗ್ಗೆ ಟೀಕಿಸಿದ್ದರು.
 ಕಳಾಹೀನವಾಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೋದಿ ಮಾತು ಹೋರಾಡುವ ಧೈರ್ಯ, ಸ್ಥೈರ್ಯ ನೀಡಿತು. ಬಿಜೆಪಿ ಭ್ರಷ್ಟಾಚಾರ, ಅನಾಚಾರ, ಒಳಜಗಳಗಳಿಂದ ಬೇಸತ್ತು ಶಾಪ ಹಾಕುತ್ತಿದ್ದ ಹಿಂದುತ್ವದ ಯುವಜನರು, ಸಾಂಪ್ರದಾಯಿಕ ಮತಗಳು ಮೋದಿ ಕರೆಯಿಂದ ಮತ್ತೆ ಮರಳಿ ಬಿಜೆಪಿ ಬಂದದಷ್ಟೇ ಲಾಭ. ಆದರೆ ಹೆಚ್ಚಿನ ಮತಗಳಿಕೆಯಂತೂ ಆಗಿಲ್ಲ ಎಂಬುದನ್ನು ಫಲಿತಾಂಶವೇ ಸ್ಪಷ್ಟಪಡಿಸಿದೆ. ಇದರ ಜತೆ ಪಿಂಕ್ ಕ್ರಾಂತಿ ಹೇಳಿಕೆಯಿಂದ ಅಲ್ಪಸಂಖ್ಯಾತರ ಮತಗಳು ಧ್ರುವೀಕರಣವಾಗಿರುವ ಸಾಧ್ಯತೆಗಳೇ ಹೆಚ್ಚು. ಸ್ಥಳೀಯ ಚುನಾವಣೆಯಲ್ಲಿ ಮುಸ್ಲಿಮರ ಮತಬ್ಯಾಂಕ್‌ಗೆ ಕನ್ನ ಹಾಕಿದ್ದ ಎಸ್‌ಡಿಪಿಐ ಮೋದಿ ಆಗಮನದಿಂದ ತಟಸ್ಥವಾಯಿತು. ಇದು ಕಾಂಗ್ರೆಸ್‌ಗೆ ವರದಾನವಾಯಿತು. ಮೋದಿ ಆಗಮನದಿಂದ ಕಾಂಗ್ರೆಸ್‌ಗೆ ಲಾಭ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಇದೇ ಹಿನ್ನೆಲೆಯಲ್ಲಿ ಹೇಳಿಕೆ ಕೂಡಾ ನೀಡಿದ್ದರು.
 2008ರಲ್ಲಿ ಮೋದಿ ಕಾರ್ಕಳ ಮತ್ತು ಪುತ್ತೂರಲ್ಲಿ ಬಂದು ಪ್ರಚಾರ ಭಾಷಣ ಮಾಡಿದ್ದರು ಆಗ ಕಾರ್ಕಳ ಕ್ಷೇತ್ರ ಕೈ ತಪ್ಪಿತ್ತು, ಈ ಬಾರಿ ಬಿಜೆಪಿ ಸುನಿಲ್ ಕುಮಾರ್ ಗೆದ್ದಿದ್ದಾರೆ. ಪುತ್ತೂರು ಈ ಬಾರಿ ಸೋತು ಹೋಗಿದೆ. ಸುಳ್ಯದಲ್ಲಿ ಬಿಜೆಪಿ ಗೆದ್ದ ಅಂತರ 1,373. ಮಡಿಕೇರಿ, ಕೇರಳ ಗಡಿಭಾಗದ ಸುಳ್ಯಕ್ಕೆ ಮಂಗಳೂರಿಂದ ಮಾಡಿದ ಸೋನಿಯಾ ಗಾಂಧಿ ಭಾಷಣ ಕೇಳಿಲ್ಲವೊ ಅಥವಾ ಮೋದಿ ಭಾಷಣ ಸುಳ್ಯಕ್ಕೆ ಮುಟ್ಟಿತೊ ಗೊತ್ತಿಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement