ಅಂತರಂಗದ ಬೆಳಕು ಬೇಕು: ಸ್ವಾಮೀಜಿ
ಪುತ್ತೂರು: ಅಂತರಂಗದ ಬೆಳಕೇ ಜ್ಞಾನದ ಜ್ಯೋತಿಯಾಗಿದೆ. ಬಾಹ್ಯದೊಳಗಿನ ದೇವಾಲಯವನ್ನು ಅಂತರಂಗದಿಂದ ನೋಡುವ ಕೆಲಸವಾಗಬೇಕು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 4ನೇ ದಿನವಾದ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಶುಭ ಹಾರೈಸಿದರು. ವಿ.ಬಿ. ಹಿರಣ್ಯ ವೆಂಕಟೇಶ್ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ವೈದ್ಯ ಡಾ. ಶ್ರೀಪತಿ ರಾವ್, ದೇವಸ್ಥಾನ ಆಡಳಿತಾಧಿಕಾರಿ ಸಿ.ಯು. ಪೂವಪ್ಪ, ಪ್ರಧಾನ ಅರ್ಚಕ ವೆಂಟೇಶ್ವರ ಭಟ್ ವೇದಿಕೆಯಲ್ಲಿದ್ದರು. ಬ್ರಹ್ಮಕಲಶೋತ್ಸವ ಸಮನ್ವಯ ಸಮಿತಿ ಕಾರ್ಯದರ್ಶಿ ಬಂಗಾರಡ್ಕ ವಿಶ್ವೇಶ್ವರ ಭಟ್ ಸ್ವಾಗತಿಸಿದರು. ಲೆಕ್ಕಪತ್ರ ಸಮಿತಿ ಸದಸ್ಯ ವಾಟೆಡ್ಕ ಕೃಷ್ಣ ಭಟ್ ವಂದಿಸಿದರು. ಶಿಕ್ಷಕಿ ವಾರಿಜಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಸುರೇಖಾ ಕೆ.ಎಸ್. ಮತ್ತು ತಂಡದಿಂದ ಗಾನ ನಿನಾದ ನಡೆಯಿತು.