ಇಂದು 6 ಕೋಟಿ ವೆಚ್ಚದ ಹೊಸ ಬ್ಲಾಕ್ ಉದ್ಘಾಟನೆ
ಮಂಗಳೂರು: ನಗರದ ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರು. 6 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾದ ಸರ್ವಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಶಸ್ತ್ರಚಿಕಿತ್ಸಾ ಪೂರ್ವ ಕೊಠಡಿ, ಹೆರಿಗೆ ಕೊಠಡಿ, ತುರ್ತು ಚಿಕಿತ್ಸಾ ಘಟಕ, ರಕ್ತ ಪರೀಕ್ಷಾ ಕೇಂದ್ರ, ಕ್ಷಕಿರಣ ಸೌಲಭ್ಯಗಳ ಹೊಸ ಬ್ಲಾಕ್ ಮೇ 10ರಂದು ಉದ್ಘಾಟನೆಯಾಗಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ಪ್ರಾಂಶುಪಾಲ ಡಾ.ಶ್ರೀನಾಥ್ ರಾವ್, ಸಂಜೆ 3.30ಕ್ಕೆ ರಾಜ್ಯ ಆಯುಷ್ ನಿರ್ದೇಶಕ ವಿಜಯ ಕುಮಾರ್ ಗೋಗಿ ಉದ್ಘಾಟಿಸಲಿದ್ದು, ಕರ್ನಾಟಕ ಹೋಮಿಯೋಪಥಿ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಟಿ.ಬಿ.ರುದ್ರೇಶ್ ಭಾಗವಹಿಸುವರು. ಮಂಗಳೂರು ಧರ್ಮಪ್ರಾಂತ್ಯ ಅಧ್ಯಕ್ಷ ಡಾ.ಅಲೋಶಿಯಸ್ ಪೌಲ್ ಡಿಸೋಜ ಅಧ್ಯಕ್ಷತೆ ವಹಿಸುವರು. ಸಂಸ್ಥೆ ನಿರ್ದೇಶಕ ಫಾ.ಪ್ಯಾಟ್ರಿಕ್ ರೋಡ್ರಿಗಸ್, ಆಸ್ಪತ್ರೆ ಆಡಳಿತಾಧಿಕಾರಿ ರೆ.ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಹಾಜರಿರುವರು.