ನಾಳೆಯಿಂದ ಕುಸ್ತಿ ಪಂದ್ಯಾಟ
ಮಂಗಳೂರು: ಬೋಳಾರ ಫೆರಿ ರಸ್ತೆಯ ವೀರ ಮರುತಿ ವ್ಯಾಯಾಮ ಶಾಲೆಯ ಅಮೃತ ಮಹೋತ್ಸವ ಅಂಗವಾಗಿ 39ನೇ ವರ್ಷದ ದ.ಕ.ಜಿಲ್ಲಾ ತುಳುನಾಡ ಕೇಸರಿ, ತುಳುನಾಡ ಕುಮಾರ್, ಮಾಸ್ಟರ್ ಶಿವಾಜಿ, ಮಹಿಳಾ ಕುಸ್ತಿ ಹಾಗೂ ಇನ್ನಿತರ ದೇಹತೂಕ ವಿಭಾಗದ ಕುಸ್ತಿ ಪಂದ್ಯಾಟ-2013 ಮೇ 11 ಮತ್ತು 12ರಂದು ಎಮ್ಮೆಕೆರೆ ಮೈದಾನದಲ್ಲಿ ನಡೆಯಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಅಮೆಚ್ಯೂರ್ ಕುಸ್ತಿ ಫೆಡರೇಷನ್ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, 11ರಂದು ಮಧ್ಯಾಹ್ನ 2.30ಕ್ಕೆ ಬೆಳ್ಳಿಯ ಗದೆಯೊಂದಿಗೆ ಕುಸ್ತಿ ಕ್ರೀಡಾ ಫಲಕಗಳ ಭವ್ಯ ಮೆರವಣಿಗೆ ವ್ಯಾಯಾಮ ಶಾಲೆಯಿಂದ ಎಮ್ಮೆಕೆರೆ ಮೈದಾನಕ್ಕೆ ಸಾಗಲಿದೆ. ಸಂಜೆ 4ಕ್ಕೆ ಕುಸ್ತಿ ಪಂದ್ಯಾಟ ಪ್ರಾರಂಭವಾಗಲಿದೆ. 6ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 12ರಂದು ಸಂಜೆ 6ಕ್ಕೆ ಸಮಾರೋಪ ಜರುಗಲಿದೆ. ಈ ಸಂದರ್ಭ 8 ಮಂದಿ ಕುಸ್ತಿಪಟುಗಳನ್ನು ಸನ್ಮಾನಿಸಲಾಗುವುದು. ಸ್ಪರ್ಧೆಯಲ್ಲಿ ಸುಮಾರು 300 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.