ಬಿಜೆಪಿ ದುರಾಡಳಿತ ಸಹಿಸದ ರಾಜ್ಯದ ಜನತೆ: ಭಾಜಪ ಹಿರಿಯ ವೇದಿಕೆ
ಮಂಗಳೂರು: ಈ ಸಲದ ಚುನಾವಣಾ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತವನ್ನು ಸಹಿಸೋದಿಲ್ಲ ಎಂಬ ಸಂದೇಶವನ್ನು ಜನತೆ ನೀಡಿದ್ದಾರೆ ಎಂದಿರುವ ಭಾಜಪ ಹಿರಿಯರ ವೇದಿಕೆ, ಆದರೂ ಅಲ್ಲಲ್ಲಿ ಭ್ರಷ್ಟಾಚಾರಿಗಳು ಚುನಾಯಿತರಾಗಿದ್ದನ್ನು ಗಮನಿಸಿದೆ ಎಂದಿದೆ.
ಕಳೆದ 4 ವರ್ಷದಿಂದ ವೇದಿಕೆ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಮತ್ತು ಸಂಘಪರಿವಾರ ಪ್ರಮುಖರಿಗೆ ಪದೇ ಪದೇ ಸಲಹೆ ಕೊಡುತ್ತಾ ಬಂದಿದೆ. ಪಕ್ಷವನ್ನು ಸರಿಪಡಿಸುವ ಸಲಹೆಯನ್ನು ಗಮನಿಸದೆ ತಮ್ಮದೇ ನೀತಿ ನಡೆ ಸರಿ ಎನ್ನುವ ದಾರ್ಷ್ಟ್ಯತನ ತೋರಿಸಿದ್ದಕ್ಕೆ ಜನತೆ ಹಾಗೂ ಕಾರ್ಯಕರ್ತರು ತಕ್ಕ ಬುದ್ಧಿ ಕಲಿಸಿದ್ದಾರೆ. ಬಿಜೆಪಿಯ ಈ ಸ್ಥಿತಿ ವೇದಿಕೆಗೆ ಸಂತೋಷ ತಂದಿಲ್ಲ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ ಪ್ರತಿಕ್ರಿಯಿಸಿದ್ದಾರೆ.
ಮತದಾರರು ಬಿಜೆಪಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದ ಹಣ ಹಾಗೂ ಅಹಂಕಾರ ಎರಡೂ ಹೊರಟುಹೋಗಿ ರಾಜ್ಯ ಬಿಜೆಪಿಯನ್ನು ದಯನೀಯ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ವೇದಿಕೆಗೆ ಇದು ನೋವು ತಂದಿದ್ದು, ಬಹಳ ಕಷ್ಟಪಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನಿಲ್ಲಿಸಿದ ಅನೇಕ ಹಿರಿಯರಿಗೆ ಈ ಫಲಿತಾಂಶ ಬೇಸರ ತಂದಿದೆ. ಆದರೆ ಅನಿವಾರ್ಯತೆಯನ್ನು ಸೃಷ್ಟಿ ಮಾಡಿರುವುದು ನಿಜ. ಇನ್ನಾದರೂ ಒಳ್ಳೆಯ ಬುದ್ಧಿಯಿಂದ ಕೆಲಸ ಮಾಡಿ ಭ್ರಷ್ಟಾಚಾರಿಗಳನ್ನು ದೂರ ಇಟ್ಟು ಬಿಜೆಪಿ ಕೆಲಸ ಮಾಡಲಿ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯ ಧೋರಣೆ ಪರಿಣಾಮ ಬಿಜೆಪಿ ನಾಯಕತ್ವ ಬೆಳೆಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.