ಬಿಜೆಪಿ ಪಾಠ ಕಲಿಯಲಿ: ಜನಾರ್ದನ ಪೂಜಾರಿ
ಮಂಗಳೂರು: ಕರ್ನಾಟಕಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಮಿಸಿದರೂ ಪಕ್ಷ ಚೇತರಿಸಿಕೊಳ್ಳಲಿಲ್ಲ. ಆದ್ದರಿಂದ ಜನತೆ ಮೋದಿಯವರು ಪ್ರಧಾನಿಯಾಗಲು ಯೋಗ್ಯರಲ್ಲ ಎಂಬುದನ್ನು ಕಾಂಗ್ರೆಸ್‌ನ್ನು ಗೆಲ್ಲಿಸುವುದರ ಮೂಲಕ ತೋರಿಸಿಕೊಟ್ಟಿದ್ದಾರೆ. ಜನತೆ ಶಾಂತಿಯನ್ನು ಬಯಸಿದ್ದಾರೆ ಹೊರತು ಬಿಜೆಪಿಯವರು ಬಿತ್ತಿದ ದ್ವೇಷವನ್ನಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದರ ಮೂಲಕ ಜನರು ನಮ್ಮ ಯಜಮಾನರು ಎಂಬ ಭಾವನೆಯಿಂದ ಸೇವೆ ಮಾಡಬೇಕಾಗಿದೆ. ಇಲ್ಲವಾದರೆ 5 ವರ್ಷಗಳ ನಂತರ ಜನ ಮತ್ತೆ ಬುದ್ಧಿ ಕಲಿಸಬೇಕಾಗುತ್ತದೆ. ಇದು ಎಲ್ಲ ಪಕ್ಷದವರಿಗೂ ಪಾಠವಾಗಿದೆ ಎಂದರು.
ಬಿಜೆಪಿಯವರು ತಾವು ತಾನು ತೋಡಿದ ಹಳ್ಳಕ್ಕೆ ತಾವೇ ಬಿದ್ದರು. 5 ವರ್ಷ ರಾಜ್ಯದಲ್ಲಿ ಮಾಡಿದ ಕರ್ಮಕಾಂಡದ ಫಲ ಇದಾಗಿದೆ. ನಗರಪಾಲಿಕೆಯಲ್ಲಿ ಸೋಲುಂಟಾದಾಗಲೇ ಬಿಜೆಪಿ ಪಾಠ ಕಲಿಯಬೇಕಿತ್ತು ಎಂದರು.
ಅಪ್ಪನನ್ನು ಮೀರಿಸಿದ ಮಗ: ಯಾವ ಶಾಸಕರೂ ಇಷ್ಟೊಂದು ಅಂತರದಲ್ಲಿ ಗೆಲುವು ಸಾಧಿಸಿದ ಚರಿತ್ರೆಯಿಲ್ಲ. ಆದರೆ ಯು.ಟಿ. ಖಾದರ್ 29 ಸಾವಿರ ಮತ ಅಂತರದಲ್ಲಿ ಗೆದ್ದಿರುವುದು ಚರಿತ್ರೆಯೇ ಸರಿ. ಅಪ್ಪನನ್ನು ಮೀರಿಸಿದ ಮಗ ಖಾದರ್ ಎಂದು ಖಾದರ್ ಸಾಧನೆ ಶ್ಲಾಘಿಸಿದರು.
ಹಾಲಾಡಿಗೆ ಅಭಿನಂದನೆ: ಕುಂದಾಪುರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಜಯ ರಾಜಕೀಯ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ. ಸುಮಾರು 41 ಸಾವಿರ ಮತ ಅಂತರದಲ್ಲಿ ಗೆದ್ದಿರುವುದು ದಾಖಲೆ ಎಂದು ಹೇಳಿದರು.