ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಮಾತಿನ ಚಕಮಕಿ, ಇಬ್ಬರಿಗೆ ಗಾಯ

Vishwanath S
Updated On : 10 May 2013, 12:23 pm

ಬಂಟ್ವಾಳ: ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆಯ ವೇಳೆ ಯುವಕನೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪರಿಣಾಮ ಇತ್ತಂಡಗಳ ನಡುವೆ ಹೊಯ್‌ಕೈ ನಡೆದ ಘಟನೆ ಬಂಟ್ವಾಳದ ನಿತ್ಯಾನಂದ ನಗರದಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಪಾರ್ವತಿ ಹಾಗೂ ಲೋಕಯ್ಯ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಿತ್ಯಾನಂದ ನಗರದಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ಸಾಗುತ್ತಿದ್ದ ವೇಳೆ ಸ್ಥಳೀಯ ನವೀನ್ ಎನ್ನುವ ಯುವಕನೋರ್ವ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮೆರವಣಿಗೆಯಲ್ಲಿದ್ದ ಯುವಕರು ಪ್ರಶ್ನಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು: ಅವಿವಾಹಿತ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನರಿಮೊಗರು ಗ್ರಾಮದ ವೀರಮಂಗಲ ಎಂಬಲ್ಲಿ ನಡೆದಿದೆ. ವೀರಮಂಗಲದ ಮಣ್ಣಗುಂಡಿ ನಿವಾಸಿ ರಾಜಾರಾಮ (55) ಮೃತರು. ಅವರು ಅವಿವಾಹಿತರಾಗಿದ್ದು, ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎರಡು ಕಡೆ ಸಂಸಾರ: ಹಣಕಾಸು ಮುಗ್ಗಟ್ಟಿಂದ ಆತ್ಮಹತ್ಯೆ
ಮಂಗಳೂರು: ಎರಡು ಮದುವೆಯಾಗಿ ಸಂಸಾರ ಸರಿದೂಗಿಸಲು ಸಾಧ್ಯವಾಗದೆ ಕಾರು ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಾರು ನಿವಾಸಿ ರವಿಪ್ರಸಾದ್ (29) ಆತ್ಮಹತ್ಯೆ ಮಾಡಿಕೊಂಡವರು. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 9 ತಿಂಗಳ ಹಿಂದೆ ನರ್ಸ್ ಒಬ್ಬರನ್ನು ಮದುವೆಯಾಗಿದ್ದರು. ಸಂಸಾರ ನಿರ್ವಹಣೆಗೆ ಎಂದು ಕಾರು ಖರೀದಿಸಿದ್ದರು. ಕಾರ್ ಖರೀದಿಗೆ ಸಾಲ ಇತ್ತು. ಎರಡು ಸಂಸಾರ ತೂಗಿಸಲು ಅನೇಕ ಕಡೆ ಸಾಲ ಮಾಡಿದ್ದರು. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕೋರ್ಟ್‌ನಲ್ಲಿ ವಿಚಾರಣೆ ಕೂಡಾ ನಡೆಯುತ್ತಿತ್ತು. ಇದಕ್ಕೂ ಹಣ ಬೇಕಾಗಿತ್ತು. ಇದರಿಂದ ನೊಂದ ಅವರು ಸೋಮವಾರ ಸಂಜೆ ಕೊಣಾಜೆಯಲ್ಲಿ ತಾನು ಖರೀದಿಸಿದ ಕಾರಿನಲ್ಲಿಯೇ ಕೀಟನಾಶಕ ಸೇವಿಸಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಮಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಂದೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಯಿಂದ ಸಾವಿರಾರು ರು. ಮೌಲ್ಯದ ಚಿನ್ನಾಭರಣ ಕಳವು
ವಿಟ್ಲ: ಇಲ್ಲಿನ ಒಕ್ಕೆತ್ತೂರು ಎಂಬಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳರು ಸಾವಿರಾರು ರು. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ ತಮ್ಮ ಕುಟುಂಬ ಸಮೇತ ಮೇ 6ರಂದು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಬುಧವಾರ ಅವರು ಮನೆಗೆ ಬಂದಾಗ ಕಳ್ಳತನ ಘಟನೆ ಬಳಕಿಗೆ ಬಂದಿದೆ. ಅವರ ಮನೆಯಲ್ಲಿದ್ದ ಚಿನ್ನದ ಸರ, ಉಂಗುರ, ಒಂದು ಸೋನಿ ಕ್ಯಾಮರಾವನ್ನು ಕಳ್ಳರು ಎಗರಿಸಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.  ಮತ್ತೊಂದು ಪ್ರಕರಣದಲ್ಲಿ, ವಿಟ್ಲ ಸಮೀಪದ ಸಿಪಿಸಿಆರ್‌ಐ ಬಳಿ ನಿವಾಸಿ ಮಾವೆ ದಿನಕರ ಭಟ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ನಡೆಸಿದ ಯತ್ನ ವಿಫಲಗೊಂಡಿದೆ. ಈ ಮನೆಯವರು ವಿದೇಶದಲ್ಲಿದ್ದು, ಬುಧವಾರ ಅವರ ಮನೆಯ ಬಾಗಿಲು ಮುರಿದಿರುವುದು ಬಳಕಿಗೆ ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಬಂಟ್ವಾಳ: ಕಬ್ಬಿಣದ ಶೀಟುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ  ಅಡ್ಡವಾಗಿ ಉರುಳಿ ಬಿದ್ದ ಘಟನೆ ಗುರುವಾರ ಮುಂಜಾನೆ ಬ್ರಹ್ಮರಕೂಟ್ಲುವಿನ ತಲಪಾಡಿ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜಿ.ಎ. ಶೀಟುಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಬೆಳಿಗ್ಗೆ 7 ಗಂಟೆಯ ವೇಳೆಗೆ ತಲಪಾಡಿಗೆ ಬರುತ್ತಿದ್ದಂತೆ ಎದುರಿನಲ್ಲಿ ಬೈಕ್ ಸವಾರನೊಬ್ಬ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೈಕ್ ಸವಾರನನ್ನು ರಕ್ಷಿಸುವ ಭರದಲ್ಲಿ ಲಾರಿಯ ಚಕ್ರಗಳು ರಸ್ತೆ ವಿಭಾಜಕದ ಮೇಲೆ ಹತ್ತಿ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿ ಸಂಪೂರ್ಣ ಜಖಂಗೊಂಡಿದ್ದು ಎಕ್ಸಿಲ್ ಮುರಿದು ಬಿದ್ದಿದೆ. ಲೋಡು ಮಾಡಲಾಗಿದ್ದ ಶೀಟುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು.

11 ರವರೆಗೆ ಅಸ್ತಮಾ ಮಾಹಿತಿ
ಮಂಗಳೂರು: ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ಎಜೆ ಆಸ್ಪತ್ರೆಯಲ್ಲಿ ಮೇ 7 ರಿಂದ 11ರವರೆಗೆ ರೋಗಿಗಳಿಗೆ ಅಸ್ತಮಾ ಕುರಿತು ಮಾಹಿತಿ ನೀಡಲಾಗುವುದು ಎಂದು ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ. ವಿಷ್ಣು ಶರ್ಮ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ತಮ ರೋಗದ ಕುರಿತು ತಿಳುವಳಿಕೆ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಸ್ತಮಾ ಹೊರರೋಗಿಗಳ ವಿಭಾಗದ ಕೊಠಡಿಯಲ್ಲಿ ರೋಗಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಶೇ. 100ರಲ್ಲಿ 8 ಮಂದಿ ಅಸ್ತಮಾಕ್ಕೆ ತುತ್ತಾಗುತ್ತಿದ್ದು, ಅಲರ್ಜಿಗಳು ಶ್ವಾಸಕೋಶಕ್ಕೆ ಸೇರಿ ತೊಂದರೆ ನೀಡುವುದೇ ಅಸ್ತಮವಾಗಿದೆ. ಸೂಕ್ತ ಔಷಧಿಯಿಂದ ರೋಗವನ್ನು ನಿವಾರಿಸಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement