ಸೋಮಾವತಿ ನದಿ ನೀರು ಮಲಿನ ಶಂಕೆ
ಬೆಳ್ತಂಗಡಿ: ಸೋಮಾವತಿ ನದಿ ವಿಷಯುಕ್ತವಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪಟ್ಟಣದಲ್ಲಿ ಕೆಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಪಟ್ಟಣದ ಸನಿಹ ಹರಿಯುತ್ತಿರುವ ಬೆಳ್ತಂಗಡಿ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಅಣೆಕಟ್ಟು ಕಟ್ಟಿ ಅಲ್ಲಿಂದ ಪಟ್ಟಣದ ನಾಗರಿಕರಿಗೆ ನೀರು ಸರಬರಾಜು ಆಗುತ್ತದೆ. ಈ ಕಾರ್ಯವನ್ನು ಇಲ್ಲಿನ ನಗರ ಪಂಚಾಯತ್ ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಆದರೆ ಗುರುವಾರ ಅಣೆಕಟ್ಟು ಸನಿಹ ನೀರು ಸಂಗ್ರಹವಾದಲ್ಲಿ ಮೀನುಗಳನ್ನು ಹಿಡಿಯುವುದಕ್ಕೋಸ್ಕರ ಸಿಡಿಮದ್ದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ನೀರು ವಿಷಯುಕ್ತವಾಗಿದೆ ಎಂದು ಶಂಕೆ ಹಬ್ಬಿದೆ. ಈ ನೀರನ್ನು ಪರೀಕ್ಷೆಗಾಗಿ ತಜ್ಞರಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.