ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾಲ್ಯದಲ್ಲೇ ಸದ್ವಿಚಾರ ಬೋಧನೆ ಅಗತ್ಯ: ಮೋಹನದಾಸ ಸ್ವಾಮೀಜಿ

Vishwanath S
Updated On : 12 May 2013, 11:04 am

ಪುತ್ತೂರು: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕೆಟ್ಟ ಜೀವನ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಇದನ್ನು ತಡೆಯುವ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ವಿಚಾರದ ಬೋಧನೆ ನಡೆಸುವ ಕಾರ್ಯಗಳಾಗಬೇಕು ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಹೇಳಿದರು.
ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ವಿದ್ವಾಂಸರು, ಜ್ಞಾನಿಗಳು, ಆಗಮ ಶಾಸ್ತ್ರಕಾರರು, ಋಷಿಮುನಿಗಳು ಮತ್ತು ಗೋ ಸಂಪತ್ತಿನಿಂದ ದೇಶದ ರಕ್ಷಣಾ ಕಾರ್ಯ ನಡೆದಿರುವುದು ಇತಿಹಾಸದ ಪುಟವನ್ನು ಗಮನಿಸಿದರೆ ನಮಗೆ ಕಂಡು ಬರುತ್ತದೆ ಎಂದ ಅವರು ಪ್ರಸ್ತುತ ದೇಶದ ಭದ್ರತೆಯೂ ಈ ನಿಟ್ಟಿನಲ್ಲಿ ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ ಪುತ್ತೂರು ಮಹಾಲಿಂಗೇಶ್ವರ ದೇವಳದ ಕರಸೇವೆ, ಸಾಮಾಜಿಕ ಮತ್ತು ಧಾರ್ಮಿಕತೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
 ವಿದ್ವಾಂಸ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರಭಾ ಆಚಾರ್ಯ ಮತ್ತು ಅವರ ಪತಿ ಹರೀಶ್ ಆಚಾರ್ಯ ಸ್ವಾಮೀಜಿಗಳನ್ನು ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ದೇವಸ್ಥಾನದ ಆಡಳಿತಾಧಿಕಾರಿ ಸಿ.ಯು. ಪೂವಪ್ಪ, ಉದ್ಯಮಿ ಎನ್. ಕರುಣಾಕರ ರೈ, ಎ.ಆರ್. ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ವೈ. ಶಿವರಾಮಯ್ಯ ಸ್ವಾಗತಿಸಿದರು. ಸ್ವಯಂ ಸೇವಕ ಸಮಿತಿಯ ಕಾರ್ಯದರ್ಶಿ ಸತೀಶ್ ಆಳ್ವ ವಂದಿಸಿದರು. ಪ್ರಫುಲ್‌ಚಂದ್ರ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ತಾಂಡವ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement