ಮನದೊಳಗಿನ ಶತ್ರುಗಳ ನಿವಾರಣೆಯಾಗಲಿ: ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ
ಪುತ್ತೂರು: ಅದ್ಬುತವಾದ ಸನಾತನ ಸಂಸ್ಕೃತಿ ನಮ್ಮದು. ಅಂತ ಸತ್ವ, ಪುನರ್‌ಜನ್ಮ ಹಾಗೂ ಪಾಪ ಪುಣ್ಯದ ಬಗ್ಗೆ ನಂಬಿಕೆ ಇರುವವರು ನಾವು. ನಮ್ಮ ಶತ್ರುಗಳು ಆ ಪಕ್ಷ- ಈ ಪಕ್ಷ, ಆ ದೇಶ - ಈ ದೇಶವಲ್ಲ. ನಮ್ಮಲ್ಲೇ ಶತ್ರುಗಳಿದ್ದಾರೆ. ಮಾನವನಲ್ಲಿರುವ ಅರಿಷಡ್ ವರ್ಗಗಳನ್ನು ದೂರ ಮಾಡಿ, ಭಗವಂತನ ಸೇವೆ ಮಾಡಿದಲ್ಲಿ ಫಲ ನಿಶ್ಚಿತ ಎಂದು ಮೂಡುಬಿದ್ರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಪಂಡಿತಾಚಾರ್ಯ ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆರನೇ ದಿನವಾದ ಶುಕ್ರವಾರ ಆರ್ಶೀವಚನ ನೀಡಿದ ಅವರು, ತಪ್ಪು ಮಾಡಿ ಭಗವಂತನಿಗೆ ಹರಕೆ ಹೇಳಿದರೆ ಖಂಡಿತ ಕ್ಷಮೆ ಇಲ್ಲ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಮಾತನಾಡಿ, ಹೊಸ ಆಲಯ ನಿರ್ಮಿಸುವ ಭಾಗ್ಯ ಈ ಜನ್ಮದವರಿಗೆ ದೊರೆತಿದೆ. ಅತ್ಯಂತ ಸಂಭ್ರಮ ಪಡಬೇಕಾಗಿದೆ. ಗಳಿಸುವುದು ಮಾತ್ರವಲ್ಲ, ತ್ಯಾಗದಿಂದ ಜೀವನ ಶುದ್ಧವಾಗುತ್ತದೆ ಎಂದು ತಿಳಿಸಿದರು. ವಾಸ್ತು ಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಶೆಣೈ, ಸಂಸದ ಹಾಗೂ ಜೀಣೋದ್ಧಾರ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಭುಜಂಗ ಗೌಡ, ಕಾರ್ಯನಿರ್ವಹಣಾಧಿಕಾರಿ ಸಿ.ಯು. ಪೂವಪ್ಪ ಇದ್ದರು.
ಭುಜಂಗ ಗೌಡ ದಂಪತಿ, ವಿನಯ ಭಂಡಾರಿ, ಅರುಣ್ ಕುಮಾರ್ ಪುತ್ತಿಲ, ರಾಮದಾಸ ಆಚಾರ್ಯ ಹಾರಾಡಿ, ಅಶೋಕ್ ಕುಮಾರ್ ಅತಿಥಿಗಳಿಗೆ ಗೌರವ ಸಮರ್ಪಿಸಿದರು. ರಮಾ ಪ್ರಭಾಕರ್ ಪ್ರಾರ್ಥಿಸಿದರು. ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ವಿಚಾರಣೆ ಮತ್ತು ಮಾಹಿತಿ ಸಮಿತಿ ಅಧ್ಯಕ್ಷ ಶೇಖರ್ ನಾರಾವಿ ವಂದಿಸಿದರು. ರಂಗಕರ್ಮಿ ರಮೇಶ್ ಉಳಾಯ ಕಾರ್ಯಕ್ರಮ ನಿರ್ವಹಿಸಿದರು.