ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪ್ರಚೋದಿತ ಪ್ರಶಂಸೆಗೆ ಕಾಯದಿರುವುದೇ ಕಲೆಯ ಹಿನ್ನಡೆಗೆ ಕಾರಣ: ಸಾಮಗ

Vishwanath S
Updated On : 13 May 2013, 11:45 am

ಬೆಳ್ತಂಗಡಿ: ಅಪ್ರಚೋದಿತ ಪ್ರಶಂಸೆಗೆ ಇಂದಿನ ಕಲಾವಿದರು ಕಾಯದಿರುವುದೇ ಕಲೆಯ ಹಿನ್ನೆಡೆಗೆ ಕಾರಣ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್. ಸಾಮಗ ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅರಸಿನಮಕ್ಕಿಯ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಪ್ರಭಾತ ಯಕ್ಷಗಾನ ಸಂಘ, ಭಂಡಿಹೊಳೆ ಇದರ ವಾರ್ಷಿಕೋತ್ಸವ- ಶ್ರೀಕಂಠ ದಾಮ್ಲೆ ಸಪ್ತತಿ, ಯಕ್ಷಶ್ರೀ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
 ಕೀರ್ತಿಗಾಗಿ, ಪ್ರಸಿದ್ಧಿಗಾಗಿ ಹಂಬಲಿಸುವ ನಿಟ್ಟಿನಲ್ಲಿ ಮುನ್ನುಗ್ಗುವ ಪ್ರವೃತಿ ಬೆಳೆಯುತ್ತಿದೆ. ಕಲೆಯಿಂದ ಕೀರ್ತಿ ಪಡೆಯೋಣ. ಆದರೆ, ಅದರೊಳೆಗೆ ಒಂದಾಗಿ, ತೊಡಗಿಸಿಕೊಂಡು ಆನಂದ ಪಡೆಯುವ ಪ್ರವೃತ್ತಿ ಹೆಚ್ಚಾದಾಗ ಮಾತ್ರ ಕಲಾವಿದನಿಗೆ ನೆಮ್ಮದಿ ಇದು ಕಲೆಯ ವಿಸ್ತಾರಕ್ಕೂ ಕಾರಣವಾಗುತ್ತದೆ ಎಂದರು.
ಸತ್ಯ ನಿಷ್ಠುರರಾಗಿರಬೇಕು: ಅಕಾಡೆಮಿ ಸ್ಥಾಪನೆಯಿಂದ ಸರ್ಕಾರವು ಯಕ್ಷಗಾನಕ್ಕೆ ಮನ್ನಣೆ ನೀಡಿದಂತಾಗಿದೆ. ಕಲಾವಿದರ ಸಾಧನೆಯ ದಾಖಲಿಕರಣ ವೈಜ್ಞಾನಿಕವಾಗಿ, ಸತ್ಯನಿಷ್ಠುರವಾಗಿರಬೇಕು ಎಂದು ಸಾಮಗ ಆಶಿಸಿದರು.
ಹಿರಿಯ ಸ್ತ್ರೀ ಪಾತ್ರಧಾರಿ ಡಾ. ಕೊಳ್ಯೂರು ರಾಮಚಂದ್ರ ರಾವ್ ಅವರು ಸಂಘದ ಸಂಚಾಲಕ, ಕಲಾವಿದ 70 ನೇ ವರ್ಷವನ್ನು ಪೂರೈಸುತ್ತಿರುವ ಶ್ರೀಕಂಠ ದಾಮ್ಲೆ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಆಶಯ ಭಾಷಣ ಮಾಡಿ ಸಂಘದಲ್ಲಿ ದುಡಿದ ಕಲಾವಿದರ ಸಾಧನೆ, ಶ್ರಮಗಳನ್ನು ನೆನಪಿಸಿಕೊಂಡರು.
ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪೋಷಕ ಮನೋಹರ ಗೋಖಲೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸದಸ್ಯ ರಂಗನಾಥ ಮರಾಠೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವರದಶಂಕರ ದಾಮ್ಲೆ ಅತಿಥಿ ಪರಿಚಯ ಮಾಡಿದರು. ಶ್ರೀಕಂಠ ದಾಮ್ಲೆ ಅವರ ಸಾಧನೆಯ ಹೊತ್ತಗೆ ಯಕ್ಷಶ್ರೀ ಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆಯಲ್ಲಿ ತರಲಾಯಿತು.
ಯಕ್ಷಗಾನ ಅವಹೇಳನಕ್ಕೆ ಉತ್ತರ ಅನಗತ್ಯ
ಯಕ್ಷಗಾನವೆಂಬುದು ಆರಾಧನಾ ರಂಗ ಭೂಮಿಯಾಗಿದೆ. ಯಕ್ಷಗಾನವೆಂಬುದು ಇತರ ಸೆಕ್ಯುಲರ್ ಕಲೆಗಳ ಹಾಗೆ ಅಲ್ಲ. ಇದಕ್ಕೆ ಇರುವ ಧಾರ್ಮಿಕ ಆವರಣವನ್ನು ಯಾರೂ ಭೇದಿಸಲು ಸಾಧ್ಯವಿಲ್ಲ. ಯಕ್ಷಗಾನವೆಂಬ ಆನೆ ರಾಜ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದನ್ನು ಕೀಳಾಗಿ ಕಾಣುವವರಿಗೆ ಯಾರೂ ಉತ್ತರ ಕೊಡುವ ಅಗತ್ಯವಿಲ್ಲ. ಯಕ್ಷಗಾನಕ್ಕೆ ಬಲಿಷ್ಠವಾದ, ಮೂಲಭೂತವಾದ ಧಾರ್ಮಿಕ ಹಿನ್ನೆಲೆ ಇದೆ. ಇದನ್ನು ಯಾರೂ ಕೀಳಾಗಿ ಕಾಣುವುದು ಸಲ್ಲದು.
ಟಿ ಎಂ.ಎಲ್. ಸಾಮಗ, ಅಧ್ಯಕ್ಷ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement