ಗುಜರಿ ಅಂಗಡಿ ಹುಡುಗನ ಶಿಕ್ಷಣಕ್ಕೆ ನೆರವಿನ ಸಹಾಯಹಸ್ತ
ಸುಳ್ಯ: ಗುಜರಿ ಅಂಗಡಿ, ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣವಾಗಿ ಉನ್ನತ ವ್ಯಾಸಂಗದ ಕನಸು ಕಾಣುತ್ತಿರುವ ಸುಳ್ಯ ಪೆರುವಾಜೆಯ ಮನೋಹರನ ಭವಿಷ್ಯ ಸುಗಮವಾಗಲು ಹಲವು ಸಹೃದಯರು ಮುಂದೆ ಬಂದಿದ್ದಾರೆ. ಮನೋಹರನ ಸಾಧನೆ ಕುರಿತು ಭಾನುವಾರ “ಕನ್ನಡ ಪ್ರಭದಲ್ಲಿ "ಗುಜರಿ ಹುಡುಗನ ಉನ್ನತ ಶಿಕ್ಷಣಕ್ಕೆ ನೆರವಾಗಿ ಶಿರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ಓದುಗರು ಆತನಿಗೆ ನೆರವಿನ ಭರವಸೆ ನೀಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿರುವ ಮನೋಹರ್‌ಗೆ ಬೆಳಗ್ಗೆ ಮತ್ತು ರಾತ್ರಿ ಕೆಲಸ ಮಾಡಿ ಪಿಯುಸಿ ಮುಗಿಸಿದ್ದು, ಇದೀಗ ಪದವಿ ಪಡೆಯುವ ಅತನ ಹಂಬಲಕ್ಕೆ ಮನೆಯ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿತ್ತು.
ಹಲವರ ಕರೆ: ಬೆಂಗಳೂರು, ಮೈಸೂರು ಮೊದಲಾದ ಕಡೆಗಳಿಂದ ಆತನಿಗೆ ಕರೆ ಮಾಡಿರುವ ಓದುಗರು ನೆರವು ನೀಡುವ ಭರವಸೆ ನೀಡಿದ್ದಾರೆ. ಬೆಂಗಳೂರಿನ ಸುರೇಶ್ ಎಂಬವವರು ಮನೋಹರ್‌ನ ವಿದ್ಯಾಭ್ಯಾಸದ ಶುಲ್ಕ ಪಾವತಿಸುವುದಾಗಿ ತಿಳಿಸಿದ್ದು, ಇನ್ನೂ ಅನೇಕ ಮಂದಿ ದೂರವಾಣಿ ಕರೆ ಮಾಡಿ ಧನಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ಮನೋಹರ್ ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.