ಅಂಬಿಗೆ ಸಚಿವ ಸ್ಥಾನ ಸಿಕ್ಕರೆ ಚಿತ್ರರಂಗಕ್ಕೆ ಲಾಭ
ಮಂಗಳೂರು/ಉಡುಪಿ, ಮೇ 13-
ಹೊಸ ಸರ್ಕಾರದಿಂದ ಚಲನಚಿತ್ರರಂಗ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ, ಮುಖ್ಯವಾಗಿ ಜನಸಾಮಾನ್ಯರಿಗೆ ಕಲ್ಯಾಣ ಕಾರ್ಯಕ್ರಮ ಮತ್ತು ಒಟ್ಟಾರೆ ಸಮಾಜದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಚಿತ್ರ ನಟ ಶಿವರಾಜ್ ಕುಮಾರ್ ಹೇಳಿದರು.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನ ಹಾಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಅಂಬರೀಶ್ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿರುವುದರಿಂದ ಸಚಿವ ಸ್ಥಾನ ಸಿಕ್ಕಿದರೆ ಚಿತ್ರರಂಗಕ್ಕೆ ಲಾಭವಾಗಲಿದೆ' ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಮೇರುನಟ ಡಾ.ರಾಜ್ಕುಮಾರ್ ಸಮಾಧಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉದ್ಘಾಟನೆ ಶೀಘ್ರ ಮಾಡುತ್ತೇವೆ ಎಂದರು.
ಮೊದಲು ಪೇಜಾವರ ಮಠಕ್ಕೆ ಭೇಟಿ ನೀಡಿದ ಶಿವರಾಜ ಕುಮಾರ್, ಪೇಜಾವರ ಶ್ರೀಗಳನ್ನು ಭೇಟಿ ಮಾಡಿದರು. ಶ್ರೀಗಳು ಅವರಿಗೆ ಶಾಲು ಹೊದೆಸಿ, ಫಲಮಂತ್ರಾಕ್ಷತೆಗಳನ್ನಿತ್ತರು. ಪಾರ್ವತಮ್ಮ ಅವರ ಆರೋಗ್ಯವನ್ನು ಶ್ರೀಗಳು ವಿಚಾರಿಸಿದರು.
ಅಲ್ಲಿಂದ ಕೃಷ್ಣ ಮಠಕ್ಕೆ ಆಗಮಿಸಿ ನವಗ್ರಹ ಕಿಂಡಿ ಮೂಲಕ ಸಪತ್ನಿಕರಾಗಿ ಕೃಷ್ಣನ ದರ್ಶನ ಪಡೆದರು. ನಂತರ ಅಂಬಲಪಾಡಿಯ ಮಹಾಕಾಳಿ ಜನಾರ್ದನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಕೊಲ್ಲೂರಿಗೆ ಆಗಮಿಸಿದ ಅವರು, ಮುಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಯೇ ತಂಗಿದ್ದು, ಸೋಮವಾರ ಮುಂಜಾನೆ ಉಡುಪಿಗೆ ಆಗಮಿಸಿದ್ದರು.
ದೇವರಲ್ಲಿ ತನಗೇನೂ ಬೇಡಿಲ್ಲ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, 'ಭಾನುವಾರ ಅಕ್ಷಯ ತದಿಗೆ ಎನ್ನುವುದು ತನಗೆ ಗೊತ್ತಿರಲಿಲ್ಲ, ಅದೃಷ್ಟವಶಾತ್ ಇದೇ ಪುಣ್ಯ ದಿನದಂದು ದೇವರ ದರ್ಶನಕ್ಕೆ ಬಂದಿದ್ದೇನೆ. ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡುವ ಆಸೆ ಇತ್ತು, ಬಂದಿದ್ದೇನೆ. ತನಗಾಗಿ ಏನೂ ಕೇಳಿಕೊಂಡಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ' ಎಂದರು.
ಬಿಡುಗಡೆಗೆ ಸಿದ್ಧವಾಗಿರುವ 'ಕಡ್ಡಿಪುಡಿ' ಚಿತ್ರದ ಬಗ್ಗೆ ನನಗೆ ಭಾರಿ ನಿರೀಕ್ಷೆ ಇದೆ. ಮುಂದಿನ ಚಿತ್ರ 'ಭಜರಂಗಿ' ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಮಳೆ ಅಡ್ಡಿ ಮಾಡಿದೆ. ಈ ಚಿತ್ರಕ್ಕೆ ಹಾಕಿದ್ದ ಸೆಟ್ ಮಳೆಯಿಂದ ಕುಸಿದು ಚಿತ್ರೀಕರಣ ಸ್ಥಗಿತಗೊಂಡಿದೆ ಎಂದರು.
ಅವರೊಂದಿಗೆ ಪತ್ನಿ ಗೀತಾ ಶಿವರಾಜ್, ಹಿರಿಯ ನಟ- 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ ಖ್ಯಾತಿಯ ಚಂದ್ರಶೇಖರ್, ನಟ- ನಿರ್ದೇಶಕ ಚಿ. ಗುರುದತ್ ಆಗಮಿಸಿದ್ದರು.