ಅಂತರ್ಧರ್ಮೀಯ ಪ್ರೇಮಕ್ಕೆ ಯುವತಿ ಹೆತ್ತವರ ವಿರೋಧ
ಮಂಗಳೂರು: ನಗರದ ಪಾಂಡೇಶ್ವರದ ಅಂತರ್ಧರ್ಮೀಯ ಪ್ರೇಮಕ್ಕೆ ಯುವತಿ ಕಡೆಯವರ ವಿರೋಧ ಹಿನ್ನೆಲೆಯಲ್ಲಿ ಜೋಡಿಯನ್ನು ಬೇರ್ಪಡಿಸಿದ ಪೊಲೀಸರು ಯುವತಿಯನ್ನು ಮಹಿಳಾ ರಾಜ್ಯ ನಿಲಯ (ರಿಮಾಂಡ್ ಹೋಮ್)ಕ್ಕೆ ಕಳುಹಿಸಿದ್ದಾರೆ.
ಪಾಂಡೇಶ್ವರದ ಅಪಾರ್ಟ್ಮೆಂಟ್ನಲ್ಲಿ ಅಕ್ಕ ಪಕ್ಕದ ಮನೆಗಳಲ್ಲಿ ಎರಡು ಕುಟುಂಬ ವಾಸವಿತ್ತು. ಈ ಪೈಕಿ ಹರೀಶ್ ಪೂಜಾರಿ ಎಂಬವರು ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದರೆ. ಪ್ರೇಯಸಿ ಯುವತಿ ಅನಿಶಾ ಓದು ಅರ್ಧಕ್ಕೆ ಮುಗಿಸಿ ಮನೆಯಲ್ಲಿದ್ದರು. ಒಂದು ವರ್ಷದಿಂದ ಇಬ್ಬರ ನಡುವೆ ಪ್ರಣಯ ಶುರುವಾಗಿತ್ತು. ಅಷ್ಟರಲ್ಲಿ ಯುವತಿ ಮನೆಯವರು ಅಪಾರ್ಟ್ಮೆಂಟ್ ಬಿಟ್ಟು ಕೋಟೆಕಾರ್ ಎಂಬಲ್ಲಿಗೆ ಮನೆ ಶಿಫ್ಟ್ ಮಾಡಿದ್ದರು.
ತಿಂಗಳ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಓಡಿಹೋಗಿ ಪುಂಜಾಲಕಟ್ಟೆಯಲ್ಲಿ ಸಂಸಾರ ಹೂಡಿದ್ದರು. ಯುವತಿ ಮನೆಯವವರು ಇವರ ವಾಸಸ್ಥಳ ಪತ್ತೆ ಹಚ್ಚಿ ಮಂಗಳವಾರ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆತಂದಿದ್ದರು. ಪೊಲೀಸರು ಯುವತಿಯ ವಯಸ್ಸು ಪರಿಶೀಲನೆ ನಡೆಸಿದಾಗ 18 ತುಂಬಿರುವುದು ತಿಳಿದುಬಂತು. ಆದರೂ ಅಂತರ್ಧರ್ಮೀಯ ವಿಚಾರವಾದ್ದರಿಂದ ಯುವತಿಯನ್ನು ರಿಮಾಂಡ್ ಹೋಮ್ಗೆ ಕಳುಹಿಸಿದ್ದಾರೆ. ಯುವಕನ ವಿರುದ್ಧ ಸಾರ್ವಜನಿಕ ಶಾಂತಿ ಭಂಗದ (ಎನ್ಸಿ) ಪಿಟ್ಟಿ ಕೇಸ್ ಹಾಕಿ ಮನೆಗೆ ಕಳುಹಿಸಿದ್ದಾರೆ.