ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅರಿಶಿಣ ಡ್ರಾಪ್ಸ್ ನಿಂದ ಆರೋಗ್ಯ ಭರವಸೆ

Lingaraj Badiger
Updated On : 16 May 2013, 12:10 pm

- ಆತ್ಮಭೂಷಣ್
ಮಂಗಳೂರು: 'ಅರಿಶಿಣ ಡ್ರಾಪ್ಸ್ ತಗೊಳ್ಳಿ, ಆರೋಗ್ಯವಂತರಾಗಿ....'
ಮುಂದೆ ಇಂಥದ್ದೊಂದು ಸ್ಲೋಗನ್ ಬಂದರೆ ಅಚ್ಚರಿಬೇಡ. ಯಾಕೆಂದರೆ ಶುದ್ಧ ಅರಿಶಿಣದಿಂದ ದ್ರಾವಣ ತಯಾರಿಸಿ ದೇಶೀಯ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಮಾನವನಿಗೆ ಬಾಧಿಸುತ್ತಿರುವ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿ ಇದನ್ನು ಉಪಯೋಗಿಸಲು ಸಾಧ್ಯ ಎಂಬುದನ್ನು ವೈದ್ಯಕೀಯ ಜಗತ್ತು ತೋರಿಸಲು ಮುಂದಾಗಿದೆ.
 ಇದರಿಂದಾಗಿ ನಾನಾ ದ್ರವರೂಪದ ಔಷಧಗಳ ಸಾಲಿಗೆ ಈಗ ಅರಿಶಿಣವೂ ಸೇರಿದೆ. ಕಚ್ಚಾ ಅರಿಶಿಣ ಬೇರನ್ನು ಪುಡಿ ಮಾಡಿ, ಸೋಸುವಿಕೆಯಿಂದ ಅದರ ಸಾರ ಹೊರತೆಗೆದು ರಸದ ರೂಪದಲ್ಲಿ ತಿಳಿಯಾದ ನಸುಗೆಂಪು ಹಾಗೂ ಹಳದಿಯುಕ್ತ ದ್ರಾವಣ ಇದು. ಬಿಸಿ ನೀರಿನೊಂದಿಗೆ ಎರಡು ಡ್ರಾಪ್ಸ್ ಶುದ್ಧ ಅರಿಶಿಣ ದ್ರಾವಣ ಸೇವಿಸಿ ಆರೋಗ್ಯವಂತರಾಗಿ ಎಂಬ ಸಂದೇಶ ಸಾರುತ್ತಿದೆ.
ಅಸ್ಸಾಂ ಅರಿಶಿನ, ಕುಮಟಾ ಉತ್ಪನ್ನ: ಇಲ್ಲಿ ಡ್ರಾಪ್ಸ್ ತಯಾರಿಕೆಗೆ ಬಳಕೆಯಾಗುವ ಅರಿಶಿಣ ಅಸ್ಸಾಂನದ್ದು. ಅಲ್ಲಿಂದಲೇ ಡ್ರಾಪ್ಸ್‌ಗೆ ಬೇಕಾಗುವಷ್ಟು ಅರಿಶಿಣವನ್ನು ತರಿಸಲಾಗುತ್ತದೆ. ಕುಮಟಾ ಹೊಳೆಗದ್ದೆಯ ಬೆತ್ತಗೇರಿಯ ನಿರ್ಮಲಾ ಫುಡ್‌ಪ್ರೊಸೆಸಿಂಗ್ ಘಟಕದಲ್ಲಿ ಇದರ ಉತ್ಪಾದನೆಯಾಗುತ್ತದೆ. ಅರಿಶಿಣದಲ್ಲಿ 30 ಬಗೆ ತಳಿಗಳಿದ್ದು, ಅಸ್ಸಾಂನಲ್ಲಿ ಶುದ್ಧ ಅರಿಶಿಣ ಬೆಳೆಯಲಾಗುತ್ತಿದೆ. ಇದರಲ್ಲಿ ಶ್ರೇಷ್ಠ ತಳಿ ಅಸ್ಸಾಂ ಭಾಗದಲ್ಲಿ ಬೆಳೆಯುವ ಅರಿಶಿಣ ತಳಿಯನ್ನು ಆಯ್ಕೆ ಮಾಡಲಾಗಿದೆ. ಅಲ್ಲಿಂದಲೇ ಅರಿಶಿಣ ತಂದು ಸಂಸ್ಕರಿಸಿ ಡ್ರಾಪ್ಸ್ ತಯಾರಿಸುತ್ತಾರೆ. ಬೆಂಗಳೂರಿನ ಉತ್ಥಾನ ಅಸೋಸಿಯೇಟ್ಸ್ ಈ ಉತ್ಪನ್ನವನ್ನು 'ಹರಿದ್ರಾರಸ' ಹೆಸರಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
 ಅರಿಶಿಣ ಬ್ಯಾಕ್ಟಿರಿಯಾ ನಿರೋಧಕ, ಫಂಗಸ್ ನಿರೋಧಕ, ವೈರಸ್ ನಿರೋಧಕವಾಗಿದ್ದು, ಭಾರತೀಯ ಮೂಲದ ಗಿಡಮೂಲಿಕೆ. ಹರಿದ್ರಾರಸವನ್ನು ನಿಯಮಿತವಾಗಿ ಅಥವಾ ಕ್ರಮಬದ್ಧವಾಗಿ ತೆಗೆದುಕೊಂಡರೆ ಬೊಜ್ಜು ಮತ್ತು ತೂಕ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಆರೋಗ್ಯಕರವಾಗಿರುತ್ತದೆ. ಲಿವರ್ ಪಿತ್ತಕೋಶದ ಸಮಸ್ಯೆ ದೂರವಾಗುತ್ತದೆ. ರಕ್ತಪರಿಚಲನೆ ಉತ್ತಮಗೊಂಡು ರಕ್ತಶುದ್ಧಿಯಾಗುತ್ತದೆ ಎನ್ನುತ್ತಾರೆ ಮಂಗಳೂರಿನ ವೇದಂ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೇಶವರಾಜ್.
ಎಲ್ಲದಕ್ಕೂ ಅರಿಶಿಣ ಮದ್ದು!: ವೈದ್ಯಕೀಯ ಚಿಕಿತ್ಸೆಯಲ್ಲಿ ರಕ್ತಹೀನತೆ, ಅಲರ್ಜಿ, ಬಿಪಿ, ಕೊಲೆಸ್ಟ್ರಾಲ್, ಶೀತ, ಕಫ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಕೊಬ್ಬು, ವಿಷಯುಕ್ತ ಆಹಾರ ಸೇವನೆ, ಜ್ವರ, ಪಿತ್ತಕೋಶದಲ್ಲಿ ಕಲ್ಲು, ಅತಿಸಾರಭೇದಿ, ಅಜೀರ್ಣ, ಮೂರ್ಛೇರೋಗ, ಸ್ತ್ರೀಯರ ಮುಟ್ಟಿನ ಸಮಸ್ಯೆ, ಮೂಲವ್ಯಾಧಿ, ಮೂತ್ರ ವಿಸರ್ಜನೆ ಸಮಸ್ಯೆ, ಅಲ್ಸರ್ ಹಾಗೂ ಗಾಯಗಳಂಥ ಸಮಸ್ಯೆಗಳ ಉಪಶಮನಕ್ಕೆ ಇದನ್ನು ಬಳಸುತ್ತಾರೆ. ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಡಾ.ಕೇಶವರಾಜ್.
 'ಹರಿದ್ರಾರಸವಲ್ಲದೆ, ಅಕ್ಕಿವರೆಗಿನ ವಿವಿಧ ಸಾವಯವ ಉತ್ಪನ್ನಗಳ ಬಳಕೆಗೆ ಒತ್ತು ನೀಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸುತ್ತಿದ್ದೇವೆ' ಎನ್ನುತ್ತಾರೆ ಮಾರಾಟ ಪ್ರತಿನಿಧಿ ಪ್ರವೀಣ್ ಕುಮಾರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement