ಕಾರ್ಮಿಕ ಕಾನೂನು ಬಲಪಡಿಸಿ: ಜೆಡಿಯು
ಮಂಗಳೂರು: ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಬಲಪಡಿಸಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಕ್ಕುಗಳ ಅನುಷ್ಠಾನಗೊಳಿಸುವಂತೆ ಸಂಯುಕ್ತ ಜನತಾ ದಳ ಸರ್ಕಾರವನ್ನು ಒತ್ತಾಯಿಸಿದೆ.
ಕಾರ್ಮಿಕ ಕಾನೂನಿನ ಅನುಷ್ಠಾನವಿಲ್ಲದ ಪರಿಣಾಮ ಕಾರ್ಮಿಕರ ಮತ್ತು ಅವರ ಕುಟುಂಬದವರ ಪರಿಸ್ಥಿತಿ ಶೋಚನೀಯವಾಗಿದೆ. ಸಾಮಾಜಿಕ ಕಳಕಳಿಯಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸೂಕ್ತ ಕ್ರಮ ಜರುಗಿಸಬೇಕೆಂದು ಜೆಡಿಯು ಜಿಲ್ಲಾಧ್ಯಕ್ಷ ಹರೀಶ್ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೆಡಿಯು ಪಕ್ಷಕ್ಕೆ ಬೆಳ್ತಂಗಡಿ ಕ್ಷೇತ್ರದಲ್ಲಿ ಸುಮಾರು 1276 ಮತ ದೊರಕಿದ್ದು, ಸಂತೋಷ ಉಂಟುಮಾಡಿದೆ. ಜನರನ್ನು ತಲುಪುವಲ್ಲಿ ಪಕ್ಷ ಎಡವಿದ್ದು, ಸ್ವಲ್ಪಮಟ್ಟಿಗಾದರೂ ಪಕ್ಷವನ್ನು ಗುರುತಿಸಿ ಮತ ಸಿಕ್ಕಿರುವ ಬಗ್ಗೆ ತೃಪ್ತಿಯಿದೆ. ಭ್ರಷ್ಟ ಸರ್ಕಾರವನ್ನು ಉಚ್ಚಾಟಿಸಿರುವ ಜನತೆ ಮತ್ತೆ ಭ್ರಷ್ಟಾಚಾರವನ್ನು ಆರಿಸಿಕೊಂಡಿದ್ದಾರೆ. ಆದ್ದರಿಂದ ಸರ್ಕಾರವನ್ನು ಸ್ವಾಗತಿಸದೆ ಗೌರವಿಸಲಾಗುವುದು ಎಂದರು.
--
ಆಯುರ್ವೇದ ಚಿಕಿತ್ಸಾ ಉಚಿತ ಶಿಬಿರ
ಮಂಗಳೂರು: ವೇದಂ ಆಯುರ್ವೇದ ಆಸ್ಪತ್ರೆ ಮತ್ತು ಸಾಹಿತ್ಯ ಕೇಂದ್ರ ಆಶ್ರಯದಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ ಸಾಹಿತ್ಯ ಕೇಂದ್ರ ಆವರಣದಲ್ಲಿ ಬುಧವಾರ ಪ್ರಾರಂಭಗೊಂಡಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಉದ್ಘಾಟಿಸಿ, ಆಯುರ್ವೇದದ ಮಹತ್ವ ಇಂದಿನ ದಿನಗಳಲ್ಲಿ ಅಗತ್ಯ. ಇಂಥ ಶಿಬಿರದ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಮೇ 17ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ನಡೆಯುವ ಈ ಶಿಬಿರದಲ್ಲಿ ನಾಡಿ ಪರೀಕ್ಷೆ, ಆಯುರ್ವೇದ ಔಷಧ, ದಿನಚರಿ, ಋತುಚರ್ಯೆ, ಆಹಾರ ಬಗ್ಗೆ ಮಾಹಿತಿ, ದೇಹ ಪ್ರಕೃತಿಯ ಬಗ್ಗೆ ವಿವರಣೆ, ಪ್ರಾಣಾಯಾಮ ಮತ್ತು ಯೋಗದ ಬಗ್ಗೆ ಮಾಹಿತಿ, ಪಂಚಕರ್ಮ ಚಿಕಿತ್ಸಾ ಮಾಹಿತಿ, ದೇಹ ಶುದ್ಧೀಕರಣ ಚಿಕಿತ್ಸಾ ಮಾಹಿತಿ ನೀಡಲಾಗುತ್ತಿದೆ. ವೇದಂ ಆಯುರ್ವೇದ ಆಸ್ಪತ್ರೆಯ ಡಾ.ಸಚಿನ್ ನಡ್ಪ ಮತ್ತು ಡಾ.ಕೇಶವರಾಜ್ ಚಿಕಿತ್ಸೆ ನೀಡುವರು. ಸಂಘಟಕ ರತ್ನಾಕರ ರಾವ್ ಕುಳಾಯಿ ಹಾಜರಿದ್ದರು.