ದ್ವೇಷ ಸಾಧನೆ ಬಿಟ್ಟು ಅನ್ಯೋನ್ಯ ಬದುಕು: ಶಾಸಕಿ ಆಶಯ
ಉಪ್ಪಿನಂಗಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ದ್ವೇಷ ಸಾಧನೆ ಬೇಡ, ಪಕ್ಷದ ಕಾರ್ಯಕರ್ತರು ಸಾಮಾಜಿಕ ಸೌಹಾರ್ದತೆಗೆ ಆದ್ಯತೆ ನೀಡಿ ಪರಸ್ಪರ ಪ್ರೀತಿ ವಿಶ್ವಾಸ, ಸಹೋದರತೆ, ಅನೋನ್ಯತೆಯಿಂದ ಬದುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಹಿರೇಬಂಡಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಮತದಾರರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿರೋಧ ಪಕ್ಷದವರಿಂದ ಕೋಮು ಭಾವನೆಗಳನ್ನು ಕೆರಳಿಸಿ, ಭೀತಿಯ ವಾತಾವರಣ ಸೃಷ್ಟಿಸುವ ಯತ್ನಗಳು ನಡೆಯಬಹುದು. ಅಂತಹ ದುಷ್ಟ ಶಕ್ತಿಗಳಿಗೆ ಸೌಹಾರ್ದತೆಯ ಮಾದರಿಯನ್ನು ತೋರಿಸಿ ದುಷ್ಕೃತ್ಯವನ್ನು ದಮನಿಸಬೇಕು. ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಗೂಂಡಾಗಿರಿ, ಸಂಘರ್ಷ, ಭಯದ ವಾತಾವರಣಕ್ಕೆ ಅವಕಾಶ ನೀಡಲಾರೆ ಎಂದರು.
ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಗೆಲವಿಗೆ ಕಾರಣಕರ್ತರಾದ ಕಾರ್ಯಕರ್ತರು ತಮ್ಮಲ್ಲಿರುವ ಸಂಘಟಿತ ಕೆಲಸವನ್ನು ಮುಂದುವರಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೊಹರಾ ನಿಸಾರ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ದಾಸರಮೂಲೆ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುಂದರೇಶ್ ಅತ್ತಾಜೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಂದ್ರ ನಿಡ್ಡೆಂಕಿ, ಜಗನ್ನಾಥ ಆರಿಜಾಲು, ಸುಮಿತ್ರ, ಸವಿತಾ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಶಾಸಕಿ ಶಕುಂತಳಾ ಶೆಟ್ಟಿ ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ದೇವಿದಾಸ ರೈ ಸ್ವಾಗತಿಸಿದರು. ಪಂಚಾಯಿತಿ ಸದಸ್ಯ ಸೇಸಪ್ಪ ನೆಕ್ಕಿಲು ವಂದಿಸಿದರು.
ಬಜತ್ತೂರಿನಲ್ಲೂ ಕೃತಜ್ಞತಾ ಕಾರ್ಯಕ್ರಮ: ಬಜತ್ತೂರು ವಲಯ ಕಾಂಗ್ರೆಸ್ ವತಿಯಿಂದ ಕೃತಜ್ಞತಾ ಸಮಾರಂಭವು ಕಾಂಗ್ರೆಸ್ ಕಾರ್ಯಕರ್ತ ಪಿ.ಬಿ. ಇಸಾಕ್ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಶೇಷಪ್ಪ ಗೌಡ, ಪಕ್ಷದ ಮುಖಂಡರಾದ ಮಾಣಿಕ್ಯರಾಜ್ ಪಡಿವಾಳ್, ಮಹೇಂದ್ರ ವರ್ಮ, ಶೇಖರ ಪೂಜಾರಿ, ಪದ್ಮನಾಭ ಗೌಡ, ಉಮ್ಮರ್ ಕೆಮ್ಮಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ, ಅನಿತಾ, ತೇಜ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಮಸೀದಿಗೆ ಭೇಟಿ: ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಇತ್ತೀಚೆಗೆ ವಳಾಲು ಮಸೀದಿಗೆ ಭೇಟಿ ನೀಡಿದರು. ಮಸೀದಿ ಖತೀಬ ಹಂಝ ಮದನಿ, ಅಧ್ಯಕ್ಷ ಹಾಜಿ ಅಬ್ಬಾಸ್, ಪದಾಧಿಕಾರಿಗಳಾದ ಅಹಮದ್ ಬಾವಾ ಇತರರು ಅವರನ್ನು ಬರಮಾಡಿಕೊಂಡು ಅಭಿನಂದನೆ ಸಲ್ಲಿಸಿದರು. ಶಾಸಕರೊಂದಿಗೆ ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಉಪಾಧ್ಯಕ್ಷ ಅಶ್ರಫ್ ಬಸ್ತಿಕ್ಕಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೊಹರಾ ನಿಸಾರ್, ವಾಣಿಕೃಷ್ಣ, ಪಕ್ಷದ ಮುಖಂಡರಾದ ಮಾಣಿಕ್ಯರಾಜ್ ಪಡಿವಾಳ್, ಮಹೇಂದ್ರ ವರ್ಮ, ಉಮ್ಮರ್ ಕೆಮ್ಮಾರ ಇತರರು ಇದ್ದರು.
ಪಾರಂತಿ ದೇಗುಲಕ್ಕೆ ಶಾಸಕಿ ಭೇಟಿ: ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಇತ್ತೀಚೆಗೆ ಬಜತ್ತೂರು ಗ್ರಾಮದ ಪಾರಂತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಸ್. ರಾಧಾಕೃಷ್ಣ, ಕಾರ್ಯದರ್ಶಿ ಮಾಣಿಕ್ಯರಾಜ್ ಪಡಿವಾಳ್, ಸದಸ್ಯರಾದ ಮಹೇಂದ್ರ ವರ್ಮ, ಸದಾನಂದ, ರಾಧಾಕೃಷ್ಣ, ಸುಧಾಕರ, ಮಹಿಳಾ ಕಾಂಗ್ರೆಸ್ನ ವಾಣಿಕೃಷ್ಣ ಇತರರು ಇದ್ದರು.