ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರಾಧಿಕಾರ, ನಿಗಮ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಜೋರು

Lingaraj Badiger
Updated On : 16 May 2013, 12:09 pm

ಮಂಗಳೂರು: ಶಾಸಕರು ಸಚಿವ ಸಂಪುಟ ಸೇರಲು ಕಸರತ್ತು ನಡೆಯುತ್ತಿದ್ದರೆ ಜಿಲ್ಲಾ ಕೇಂದ್ರದಲ್ಲಿರುವ ಹಿಂಬಾಲಕರು ಅಕಾಡೆಮಿ, ಪ್ರಾಧಿಕಾರ, ನಿಗಮದ ಸರ್ಕಾರಿ ಕಾರು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
 ಟಿಕೆಟ್‌ಗಾಗಿ ರೇಸ್‌ನಲ್ಲಿದ್ದವರು, ಬಂಡಕೋರರಾಗಿ ಸ್ಪರ್ಧಿಸಲು ತಯಾರಿ ನಡೆಸಿ ಕೊನೆ ಹಂತದಲ್ಲಿ ವರಿಷ್ಠರ ಮನವಿಗೆ ಮಣಿದು ಹಿಂದೆಗೆದುಕೊಂಡವರು, ಚುನಾವಣೆ ಗೆಲ್ಲಲು ಅತಿ ಹೆಚ್ಚು ಶ್ರಮಿಸಿದವರು ಸರ್ಕಾರಿ ಕಾರು ಹಿಂದೆ ಬಿದ್ದಿದ್ದಾರೆ.
 ಕಾಂಗ್ರೆಸ್ ಸರ್ಕಾರ ಇರಲಿ, ಬಿಜೆಪಿ ಸರ್ಕಾರ ಬರಲಿ ಕರಾವಳಿ ಪ್ರದೇಶದ ಮುಖಂಡರಿಗೆ ಮೀನುಗಾರಿಕೆ ಅಭಿವೃದ್ಧಿ ನಿಗಮ, ಗೇರು ಅಭಿವೃದ್ಧಿ ನಿಗಮ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಅಭಿವೃದ್ಧಿ ನಿಗಮಗಳ ಅಧ್ಯಕ್ಷತೆ ಹುದ್ದೆ ಸಿಕ್ಕೇ ಸಿಗುತ್ತದೆ. ಇದರೊಂದಿಗೆ ಮಹಾನಗರ ಪಾಲಿಕೆಯ ನಾಮನಿರ್ದೇಶನ ಸದಸ್ಯತ್ವಕ್ಕೂ ತುರುಸಿನ ಸ್ಪರ್ಧೆ ಎರ್ಪಟ್ಟಿದೆ. ಸಚಿವ ಸಂಪುಟ ರಚನೆ ಬಳಿಕ ಮತ್ತಷ್ಟು ಪೈಪೋಟಿ ಎರ್ಪಡಲಿದೆ.
 ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷತೆ ಕೂಡಾ ಪ್ರಭಾವಶಾಲಿಯೇ. ಹೀಗಾಗಿ ಕಡೆಗಣಿಸಲ್ಪಟ್ಟ ಹಿರಿಯ ನಾಯಕರು ನಿಗಮ, ಪ್ರಾಧಿಕಾರ ಹುದ್ದೆಗಳತ್ತ ಕಣ್ಣು ಹಾಕುತ್ತಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದಕ್ಷಿಣ ವಿಧಾನಸಭೆ ಟಿಕೆಟ್ ಅಕಾಂಕ್ಷಿಯಾಗಿದ್ದ ಸುರೇಶ್ ಬಲ್ಲಾಳ್, ಮುಡಾ ಮಾಜಿ ಅಧ್ಯಕ್ಷ ತೆಜೋಮಯ, ಕಳ್ಳಿಗೆ ತಾರನಾಥ ಶೆಟ್ಟಿ, ಕಾರ್ಪೊರೇಟರ್ ಹರಿನಾಥ್ ಮೊದಲಾದ ಹಳಬರು ರೇಸ್‌ನಲ್ಲಿದ್ದರೆ, ಅವರ ಜತೆ ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್  ಶೆಟ್ಟಿ, ಎಐಸಿಸಿ ಸದಸ್ಯ ಪಿ.ವಿ. ಮೋಹನ್, ಮಹಮ್ಮದ್ ಬದ್ರುದ್ದೀನ್ ಅವರೂ ರೇಸ್‌ನಲ್ಲಿದ್ದಾರೆ. ಮುಡಾದಲ್ಲದರೂ ಹಾಕು ಬೇರಲ್ಲಾದರೂ ಹಾಕು ಸರ್ಕಾರಿ ಕಾರು ಮಾತ್ರ ಬೇಕು ಎನ್ನುವವರು ಇದ್ದಾರೆ.
 ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ವಿಜಯಕುಮಾರ್ ಶೆಟ್ಟಿ ವರಿಷ್ಠರ ಆಶ್ವಾಸನೆಗೆ ಮಣಿದು ಕೊನೆ ಹಂತದಲ್ಲಿ ಬಂಡಾಯದಿಂದ ಹಿಂದೆ ಸರಿದಿದ್ದರು. ಅಲ್ಲಿ ಕಾಂಗ್ರೆಸ್ ಗೆದ್ದಿದೆ.
 ಈ ಹಿನ್ನೆಲೆಯಲ್ಲಿ ಅವರು ದೊಡ್ಡ ಹುದ್ದೆ ಭರವಸೆಯಲ್ಲಿದ್ದಾರೆ. ಅಂತಿಮವಾಗಿ ನಿಗಮ, ಮಂಡಳಿ ಅಥವಾ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸಿಕ್ಕರೆ ಸಾಕು ಎಂಬ ಲೆಕ್ಕಾಚಾರದಲ್ಲಿದ್ದಾರೆ.
 ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮಾಜಿ ಮೇಯರ್ ಆಶ್ರಫ್ ಸ್ಪರ್ಧೆಯಲ್ಲಿದ್ದಾರೆ.
 ಉಮಾನಾಥ ಕೋಟ್ಯಾನ್ ಮೂಡುಬಿದರೆಯಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ ಹಿನ್ನೆಲೆಯಲ್ಲಿ  ತುಳು ಸಾಹಿತ್ಯ ಅಕಾಡೆಮಿಗೆ ರಾಜಿನಾಮೆ ನೀಡಿದ್ದರು. ಅಕಾಂಕ್ಷಿಗಳು ಅನೇಕ ಇದ್ದರೂ ನಿವೃತ್ತ ಕುಲಪತಿ  ಬಿ.ಎ. ವಿವೇಕ್ ರೈ ಅವರ ಹೆಸರು ಸೂಚಿಸುವ ಸಾಧ್ಯತೆ ಹೆಚ್ಚಿದೆ.
-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement