ವಿಜ್ಞಾನಿ, ಎಂಜಿನಿಯರ್‌ಗಳಿಂದ ಸಂಶೋಧನೆಗೆ ಮಹತ್ವ: ಪ್ರಕಾಶ್
ನಿಟ್ಟೆ: ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ವ್ಯವಸ್ಥಿತವಾಗಿ ಆಲೋಚಿಸುತ್ತಾರೆ ಮತ್ತು ವಿಶ್ಲೇಷಣಾತ್ಮಕವಾಗಿ ಸಮಸ್ಯೆ ಪರಿಹರಿಸುವುದರಿಂದ ಅವರು ಸಂಶೋಧನೆ ಕಡೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಎಂದು ಸಿಂಗಾಪುರದ ನ್ಯಾಶನಲ್ ವಿ.ವಿ.ಯ ಪ್ರಾಧ್ಯಾಪಕ ಡಾ. ಪ್ರಕಾಶ್ ಕುಮಾರ್ ಅಭಿಪ್ರಾಯಪಟ್ಟಿದದ್ದಾರೆ.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ (ಐಸಿಇಟಿಇ-13)ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಿಚಿತ ಸತ್ಯ ಪತ್ತೆ: ಸಂಶೋಧನೆ ಅಂದರೆ ಜಾಗತಿಕವಾಗಿ ಜನರು ಪುರಸ್ಕರಿಸಿ ಮನ್ನಣೆ ನೀಡವಂತಹ ಅಪರಿಚಿತ ಸತ್ಯ ಪತ್ತೆ ಹಚ್ಚುವುದು. ಇದಕ್ಕೆ ಬೇಕಾದ ಜ್ಞಾನವನ್ನು ಮೂಲಸಂಶೋಧನೆ, ತಜ್ಞರ ಸಂವಹನ, ವಿಚಾರ ಗೋಷ್ಠಿಗಳ ಹಾಗೂ ಇಂತಹ ಅಂತಾರಾಷ್ಟ್ರೀಯ ಸಮಾವೇಶಗಳ ಮೂಲಕ ಪಡೆಯಬೇಕು ಎಂದು ನುಡಿದರು.
ಪರಿವಿಡಿ ಬಿಡುಗಡೆ: ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್ಕರ್ ಸಮ್ಮೇಳನದ ಪರಿವಿಡಿ ಬಿಡುಗಡೆಗೊಳಿಸಿ ಮಾತನಾಡಿ, ಸಂಶೋಧನೆಯ ವೈಫಲ್ಯ ಬಗ್‌ಗೆ ಚಿಂತಿಸಸದೆ ಯಶಸ್ಸು ಸಿಗುವವರೆಗೂ ನಿರಂತರ ಪರಿಶ್ರಮ ಪಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಶೋಧಕರು ದೀರ್ಘಕಾಲದ ಗುರಿ ಹೊಂದಿರಬೇಕಾಗುತ್ತದೆ ಎಂದರು.
ಉಪಪ್ರಾಂಶುಪಾಲ ಹಾಗೂ ಡೀನ್ ಡಾ. ರಮೇಶ್ ಚಿತ್ತಂತಾಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದರು. ಮುಖ್ಯ ಸಂಯೋಜಕ ಡಾ ಕೆ. ಸುಬ್ರಮಣ್ಯ ಭಟ್ ಮಾತನಾಡಿ, ಸಮಾವೇಶದ ವಿವಿಧ ತಾಂತ್ರಿಕ ವಿಭಾಗದ ವಿಶೇಷ ಉಪಸ್ಯಾಸಗಳ ಜೊತೆಗೆ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ 100ಕ್ಕಿಂತಲೂ ಅಧಿಕ ಪ್ರಬಂಧಗಳು ಮಂಡನೆಯಾಗಲಿವೆ. ಅಲ್ಲದೆ 25ಕ್ಕಿಂತಲೂ ಅಧಿಕ ಪ್ರಬಂಧಗಳಿಗೆ ಭಿತ್ತಿಪತ್ರದ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಸಂಯೋಜಕ ಡಾ.ಶ್ರೀನಿವಾಸ ಪೈ ಸ್ವಾಗತಿಸಿದರು. ಇನ್ನೋರ್ವ ಸಂಯೋಜಕ ಡಾ.ನರಸಿಂಹ ಮರಕಾಲ ವಂದಿಸಿದರು.