3 ಕೊಂಕಣಿ ಗೌರವ ಪ್ರಶಸ್ತಿ, 3 ಪುಸ್ತಕ ಬಹುಮಾನ, 4 ಯುವ ಪುರಸ್ಕಾರ
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ, ಯುವಪುರಸ್ಕಾರ ಪ್ರದಾನ ಸಮಾರಂಭ ಮೇ 25ರಂದು ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ನಡೆಯಲಿದೆ.
ಕೊಂಕಣಿ ಭಾಷೆ ಮತ್ತು ಸಾಹಿತ್ಯ ಗೌರವ ಪ್ರಶಸ್ತಿ ಮಂಗಳೂರಿನ ಪಾವ್ಲ್ ಮೊರಾಸ್, ಕಲೆ ಪ್ರಶಸ್ತಿ ಕೃಷ್ಣ ಶರ್ಮ ಕಾವ್ಯನಾಮದ ಹೊನ್ನಾವರ ಕೃಷ್ಣ ಭವಾನಿ ಶಂಕರ್ ಭಟ್ಟ, ಜಾನಪದ ಪ್ರಶಸ್ತಿ ಯಕ್ಷಗಾನ ಕಲಾವಿದ ಕುಂದಾಪುರ ಅರ್ಗೋಡು ಕೆ.ಗೋವಿಂದರಾಯ ಶೆಣೈಗೆ ನೀಡಲಾಗುವುದು ಎಂದು ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಂಕಣಿ ಪುಸ್ತಕ ಬಹುಮಾನ ದೋ.ಪಿಯುಸ್ ಫಿದೆಲಿಸ್ ಪಿಂಟೊ ಬರೆದಿರುವ ಕರಾವಳ್ ಕರ್ನಾಟಕಾಂತ್ಯ್ಲಾ ಕೊಂಕ್ಣಿ ಕೆಥೋಲಿಕಾಂತೊ ಇತಿಹಾಸ್ ಪುಸ್ತಕ, ಕೊಂಕಣಿ ಸಣ್ಣ ಕತೆ ಬಹುಮಾನ ತಾರಾ ಲವೀನ್ ಫರ್ನಾಂಡಿಸ್ ಬರೆದೆ ದಸ್ಕತ್ ಆನಿ ಹೆರ್ ಕಥಾ ಪುಸ್ತಕಕ್ಕೆ ಲಭಿಸಿದೆ.
ಅರುಣಾ ರಾವ್ ಬರೆದಿರುವ ಸಾಕ್ಷಾತ್ಕಾರ ಕೃತಿಗೆ ಕೊಂಕಣಿ ಕವನ ವಿಭಾಗದಲ್ಲಿ ಬಹುಮಾನ ದೊರೆತಿದೆ ಎಂದು ಹೇಳಿದರು.
ಯುವ ಪುರಸ್ಕಾರ ಪ್ರಶಸ್ತಿಗೆ ಎನ್ಐಟಿಕೆಯಲ್ಲಿ ಬಿಟೆಕ್ ಪದವಿ ಪಡೆದಿರುವ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಅಂಕುಶ್ ಎನ್. ನಾಯಕ್, ಅಂತಾರಾಷ್ಟ್ರೀಯ ಚೆಸ್ ಫಿಡೆ ಕ್ರಮಾಂಕದಲ್ಲಿ 2245ನೇ ಸ್ಥಾನದಲ್ಲಿರುವ ವಿಯಾನಿ ಆಂಟೋನಿಯೊ ಡಿಕುನ್ಹ, ಮಹಾಲಸ ಚಿತ್ರಕಲಾ ಶಾಲೆಯಿಂದ ಪದವಿ ಪಡೆದಿರುವ ಅಪರೂಪದ ಕಲಾವಿದ ರಾಮಕೃಷ್ಣ ನಾಯಕ್, ಸಂಸ್ಕೃತ ಎಂ.ಎ.ಯಲ್ಲಿ ಶೇ.90 ಅಂಕ ಗಳಿಸಿದ್ದು, ಬ್ರೈಲ್ ಲಿಪಿ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.84 ಅಂಕ ಗಳಿಸಿರುವ ದೃಷ್ಟಿ ವಿಕಲ ಚೇತನ ಅಂಕೋಲ ಕಾಕರಮಠದ ನಾರಾಯಣ ಭಗವಾನ್ ರಾಯ್ಕರ್ಗೆ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಕುಮಟಾ ಗಿಬ್ಸ್ ಪ್ರೌಢಶಾಲೆ ಡಾ.ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಮೇ 25ರಂದು ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಡಾ.ಬಿ. ದೇವದಾಸ್ ಪೈ, ಎಂ.ಅಶೋಕ್ ಶೇಟ್ ಇದ್ದರು.