ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರೀಡಾ ಆಯ್ಕೆ
ಸುಳ್ಯ: ಮೇ 10ರಿಂದ 12ರವರೆಗೆ ಕೇರಳದ ತಿರುವನಂತಪುರಂನಲ್ಲಿ ನಡೆದ 33ನೇ ರಾಷ್ಟ್ರ ಮಟ್ಟದ ಹಿರಿಯರ ಕೂಟದಲ್ಲಿ ಸುಳ್ಯದ ಕದಿಕಡ್ಕ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೀಡಾ ಐಡಾ ಲೂವಿಸ್ ಭಾಗವಹಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಜಾವಲಿನ್ ಎಸೆತದಲ್ಲಿ ಪ್ರಥಮ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದ ಅವರು, ಇಟಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೀಡಾ, ಕುಂದಾಪುರ ನಾಡ ಪಡುಕೋಣೆ ಗ್ರೆಗೋರಿ ಹೈಸ್ಕೂಲ್ನ ಹಳೆ ವಿದ್ಯಾರ್ಥಿನಿ.
ಅಗ್ಗದ ಪ್ರಚಾರ ಬೇಡ: ಹರಿಕೃಷ್ಣ ಪುನರೂರು
ಮಂಗಳೂರು: ಅಗ್ಗದ ದರದಲ್ಲಿ ಸಾರಾಯಿ ಮತ್ತು ಅಕ್ಕಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಘೋಷಣೆ ಬಡವರ್ಗದ ಜನತೆಯಲ್ಲಿ ಸೋಮಾರಿತನ ಬಿತ್ತುತ್ತಿರುವ ಯೋಜನೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಆಕ್ಷೇಪಿಸಿದ್ದಾರೆ. ಕಡಿಮೆ ದರದಲ್ಲಿ ಸಾರಾಯಿ ದೊರೆತರೆ ಮನೆಮಠ ಕಳೆದುಕೊಂಡ ಕುಟುಂಬಗಳು ಬೀದಿಪಾಲಾಗುತ್ತದೆ. ಮನುಷ್ಯನ ಆರೋಗ್ಯಕ್ಕೆ ಮುಖ್ಯವಾಗಿರುವ ಹಾಲು ನೀಡುವ ಗೋವನ್ನು ಹತ್ಯೆಗೆಯ್ಯಲು ಆದೇಶ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಯವರು ಜನತೆಗೆ ಒಳ್ಳೆಯದಾಗುವ ತೀರ್ಮಾನ ಕೈಗೊಳ್ಳಲಿ ಎಂದು ಹೇಳಿದ್ದಾರೆ.
ಇಂದು ರಕ್ತನಿಧಿ ಘಟಕ ಉದ್ಘಾಟನೆ
ಮಂಗಳೂರು: ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ವತಿಯಿಂದ ಮೇ 19 ರಂದು ಬೆಳಗ್ಗೆ 8.30ಕ್ಕೆ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿ 'ರಕ್ತನಿಧಿ ಘಟಕ' ಉದ್ಘಾಟನೆಗೊಳ್ಳಲಿದೆ. ಆ ಸಂದರ್ಭ ರೆಡ್ಕ್ರಾಸ್ ಜಿಲ್ಲಾ ಘಟಕದ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ. ಮುರಳಿ ಮೋಹನ್ ಚೂಂತಾರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ದಿಲ್ಲಿಯ ಸೆಂಟ್ರಲ್ ಲೈಸೆನ್ಸ್ ಅಪ್ರೂವಿಂಗ್ ಅಥಾರಿಟಿ ಆಫ್ ದ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ ಸಂಸ್ಥೆ ರಕ್ತನಿಧಿ ಘಟಕಕ್ಕೆ ಪರವಾನಗಿ ನೀಡಿದೆ. ಇದರಿಂದ ಘಟಕಕ್ಕೆ ರಕ್ತ ಸಂಗ್ರಹಣೆ, ಮಾರಾಟ, ಹಂಚಿಕೆ ಸೇರಿದಂತೆ ಹಲವು ರೀತಿಯಲ್ಲಿ ಉಪಯುಕ್ತವಾಗಲಿದೆ. ಪರಾವನಗಿಯು 2018ರ ಮಾ. 18ರವರೆಗೆ ಕಾಲಾವಧಿ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ www.redcrossdakshinakannada.org , 0824-2410787 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ತುಳು ಅಕಾಡೆಮಿಗೆ ಆಡಳಿತಾಧಿಕಾರಿ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಆಡಳಿತಾಧಿಕಾರಿಯಾಗಿ ಬಿ.ಟಿ.ಮುನಿರಾಜಯ್ಯ ನೇಮಕ ಮಾಡಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಮಹಾನಗರ ಪಾಲಿಕೆಯ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಬೋಟ್ ಮುಳುಗಡೆ: ಐವರು ಮೀನುಗಾರರ ರಕ್ಷಣೆ
ಮಂಗಳೂರು: ಉಳ್ಳಾಲ ಅಳಿವೆಬಾಗಿಲು ಬಳಿ ಮೀನುಗಾರಿಕೆಂದು ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಶನಿವಾರ ಬೆಳಗ್ಗೆ ಅಳಿವೆಬಾಗಿಲು ಮೂಲಕ ಕಡಲು ಪ್ರವೇಶಿಸಿದ್ದ ಸೀ ರಾಕ್ ಹೆಸರಿನ ಬೋಟ್ನೊಳಗೆ ನೀರು ನುಗ್ಗಿ ಮುಳುಗಡೆಯಾಯಿತು. ಇದೇ ಸಂದರ್ಭ ಸಮೀಪದಲ್ಲಿದ್ದ ಪ್ರೆಸ್ಟೀಜ್ ಎಂಬ ಹಡಗಿನಲ್ಲಿದ್ದ ಮೀನುಗಾರರು ಸೀ ರಾಕ್ ಬೋಟ್ನಲ್ಲಿದ್ದ ಉದಯ, ಶಿವ, ಮಧುಕರ, ರವಿ, ವಿಘ್ನೇಶ್ ಎಂಬವರನ್ನು ರಕ್ಷಿಸಿದ್ದಾರೆ. ಸಿ ರಾಕ್ ಬೋಟ್ ನೂರುಷಾ ಎಂಬವರಿಗೆ ಸೇರಿದ್ದು, ಇತ್ತೀಚೆಗೆ ದಯಾನಂದ ಉಳ್ಳಾಲರು ಖರೀದಿಸಿದ್ದರು.