ಅಭಿವೃದ್ಧಿ ವಿರುದ್ಧ ಅಪಪ್ರಚಾರದ ಗೆಲವು: ಡೀವಿ
ಸುಳ್ಯ: ರಾಜ್ಯದಲ್ಲಿ ಈ ಬಾರಿ ನಡೆದದ್ದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ. ಇಲ್ಲಿ ಅಪಪ್ರಚಾರ ಗೆದ್ದು, ಅಭಿವೃದ್ಧಿಗೆ ಸೋಲಾಗಿದೆ. ಬಿಜೆಪಿಗೆ ಈ ಹಿನ್ನಡೆ ತಾತ್ಕಾಲಿಕ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಅಂಗಾರ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲ ಸಮಿತಿ ಕಾರ್ಯಕರ್ತರು ಮತ್ತು ಮತದಾರರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸಾಧನೆಯ ಮುಂದುವರಿಕೆ: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನವೇ ಮಾಡಿದ ಘೋಷಣೆಗಳು ಬಿಜೆಪಿ ಸಾಧನೆಯ ಮುಂದುವರಿದ ಭಾಗವಷ್ಟೇ. ಹೀಗಾಗಿ ಅದೇನೂ ಅಂತಹ ದೊಡ್ಡ ಸಂಗತಿಯಲ್ಲ. ಹಾಲಿಗೆ ಸಹಾಯಧನ ನೀಡಬೇಕೆಂದು 50 ವರ್ಷ ಆಡಳಿತ ನಡೆಸಿದ ಅವರಿಗೆ ಅರಿವಿರಲಿಲ್ಲವೇ? ಸಾಲ ಮನ್ನಾ ಮಾಡಬೇಕೆಂದು 50 ವರ್ಷ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಡೀವಿ, ಅದನ್ನೆಲ್ಲ ಬಿಜೆಪಿ ಸರ್ಕಾರ ಮಾಡಿ ತೋರಿಸಿತು. ಅದರ ಮುಂದುವರಿಕೆ ಘೋಷಣೆಯನ್ನಷ್ಟೆ ಅವರು ಮಾಡಿದ್ದಾರೆ ಎಂದು ಹೇಳಿದರು.
ಇತಿಹಾಸ ನಿರ್ಮಾಣ: ಸಮಾರಂಭ ಉದ್ಘಾಟಿಸಿದ ಸಂಸದ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಕೂಡ ಸುಳ್ಯದಲ್ಲಿ ಅಂಗಾರರನ್ನು ಗೆಲ್ಲಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಅಧಿಕಾರದ ಮದದಲ್ಲಿರುವ ಕಾಂಗ್ರೆಸ್ನಿಂದ ದ್ವೇಷ ರಾಜಕಾರಣ ನಡೆದರೆ ಬಿಜೆಪಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದರು.
ಪ್ರತೀಕಾರ: ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸುಳ್ಯ, ಜಿಲ್ಲೆಯ ಮರ್ಯಾದೆ ಉಳಿಸಿದ ಕ್ಷೇತ್ರ ಎಂದರಲ್ಲದೆ, ಮುಂಬರುವ ಚುನಾವಣೆಗಳನ್ನು ಗೆಲ್ಲುವ ಮೂಲಕ ನಾವು ಪ್ರತೀಕಾರ ತೀರಿಸಬೇಕು ಎಂದರು.
ಬುದ್ಧಿ ಕಲಿಸಬೇಕಾಗಿದೆ: ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಮಾತನಾಡಿ, ಜಿಲ್ಲೆಯ ನಮ್ಮ ಸಂಘಟನೆಯನ್ನು ಛಿದ್ರ ಮಾಡಲೆಂದೇ ಜಿಲ್ಲೆಗೆ ಕಾಂಗ್ರೆಸ್ 3 ಸಚಿವ ಪದವಿ ನೀಡಿದೆ ಎಂದರು.
ಕಾರ್ಯಕರ್ತರೇ ಸ್ಟಾರ್: ಅಭಿನಂದನಾ ಭಾಷಣಗೈದ ಜಿಲ್ಲಾ ಬಿಜೆಪಿ ಪ್ರಭಾರಿ ಪ್ರತಾಪಸಿಂಹ ನಾಯಕ್ ಮಾತನಾಡಿ, ಕಾರ್ಯಕರ್ತರೇ ನಮ್ಮ ಸ್ಟಾರ್ ಪ್ರಚಾರಕರು. ಸಂಘಟನೆ ಬಲವಾಗಿದ್ದರೆ ಯಾವ ಅಲೆಯೂ ಕೆಲಸ ಮಾಡುವುದಿಲ್ಲ ಎನ್ನುವುದಕ್ಕೆ ಸುಳ್ಯ ಸಾಕ್ಷಿಯಾಗಿದೆ ಎಂದರು.
ಶಾಸಕ ಎಸ್.ಅಂಗಾರರನ್ನು ಸನ್ಮಾನಿಸಲಾಯಿತು. ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸ್ವಾಗತಿ, ಚುನಾವಣೆ ಉಸ್ತುವಾರಿ ವಹಿಸಿದ್ದ ಎ.ವಿ. ತೀರ್ಥರಾಮ ವಂದಿಸಿದರು. ಮುರಳಿಕೃಷ್ಣ ಚಳ್ಳಂಗಾರು, ಸುರೇಶ್ ಕಣೆಮರಡ್ಕ ನಿರೂಪಿಸಿದರು.
ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಕೆಎಫ್ಡಿಸಿ ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ, ಬಿಜೆಪಿ ನಾಯಕರಾದ ದೇವದಾಸ್ ಶೆಟ್ಟಿ, ಎನ್.ಎ. ರಾಮಚಂದ್ರ, ಉಪೇಂದ್ರ ಕಾಮತ್, ನವೀನ್ ರೈ ಮೇನಾಲ, ಬಾಲಕೃಷ್ಣ ಬಾಣಜಾಲು, ಆಶಾ ತಿಮ್ಮಪ್ಪ, ಪಿ.ಕೆ. ಉಮೇಶ್, ವಿ. ಸಂಜಯ ಕುಮಾರ್, ಕೆ.ಎಂ. ಬಾಬು, ಭಾಗೀರಥಿ ಮುರುಳ್ಯ, ಪುಷ್ಪಾವತಿ ಬಾಳಿಲ ಇದ್ದರು.