ತಂದೆ ಆಸ್ಪತ್ರೆ ದಾಖಲಾದ ದುಃಖ; ನೇಣಿಗೆ ಶರಣಾದ ಪುತ್ರಿ
ಮಂಗಳೂರು: ಮಲೇರಿಯಾ ಜ್ವರದಿಂದ ತಂದೆ ಆಸ್ಪತ್ರೆ ಸೇರಿದ ದುಃಖ ತಾಳಲಾರದೆ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ. ಕಾವೂರಿನ ಬೊಳ್ಪುಗುಡ್ಡೆ ನಿವಾಸಿ ವಾಲ್ಟರ್ ಲೋಬೋ ಪುತ್ರಿ, ಖಾಸಗಿ ಸಂಸ್ಥೆ ಉದ್ಯೋಗಿ ವಿಲ್ಲತ್ ಲಿಮಾ ಲೋಬೊ (26) ಮೃತಳು.
ಈಕೆಯ ತಂದೆ ವಾಲ್ಟರ್ ಒಂದು ವಾರದ ಹಿಂದೆ ಮಲೇರಿಯಾ ಜ್ವರದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಭಾನುವಾರ ಬೆಳಗ್ಗೆ ರಕ್ತದ ಅಗತ್ಯವಿತ್ತು. ಈಕೆಯ ತಾಯಿ ರಕ್ತ ನೀಡಿ ಮನೆಗೆ ವಾಪಾಸ್ಸಾಗಿದ್ದರು. ಮಧ್ಯಾಹ್ನ ಪುನಃ ರಕ್ತಬೇಕು ಎಂದು ಆಸ್ಪತ್ರೆಯಿಂದ ಕರೆ ಬಂದಿತ್ತು. ಅದರಂತೆ ತಾಯಿ ಮತ್ತೆ ರಕ್ತಕ್ಕೆ ವ್ಯವಸ್ಥೆ ಮಾಡಲು ಆಸ್ಪತ್ರೆಗೆ ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಗೆ ತಾಯಿ ಫೋನಾಯಿಸಿದರೆ ಪುತ್ರಿ ಕರೆ ಸ್ವೀಕರಿಸಿಲ್ಲ. ಬಳಿಕ ಪಕ್ಕದ್ಮನೆಗೆ ಫೋನಾಯಿಸಿ ವಿಚಾರಿಸಿದಾಗ, ವಿಲ್ಲತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ತಂದೆಯ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಪುತ್ರಿ, ಅವರ ಆರೋಗ್ಯದ ಚಿಂತೆಯಿಂದ ನೊಂದು ಈ ಕೃತ್ಯವೆಸಗಿರಬೇಕು ಎಂದು ಹೇಳಲಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.