ನೀರುಮಾರ್ಗ: ಬಸ್ ಚಾಲಕಗೆ ಕಡಿದು ತಂಡ ಹತ್ಯೆ
ಮಂಗಳೂರು: ನಗರದ ನೀರುಮಾರ್ಗ ಬಳಿ ಸಿಟಿ ಬಸ್ ಚಾಲಕನನ್ನು ಏಳು ಮಂದಿಯ ತಂಡ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಕೊಲೆಗೀಡಾದ ಬಸ್ ಚಾಲಕನನ್ನು ಕುಲಶೇಖರ ಜ್ಯೋತಿ ನಗರ ನಿವಾಸಿ ಬಾಲಕೃಷ್ಣರ ಪುತ್ರ ಪ್ರಸನ್ನ (32)ಎಂದು ಗುರುತಿಸಲಾಗಿದೆ. ಪ್ರಸನ್ನ ಅವರು ಕೀತ್ ಹೆಸರಿನ ರೂಟ್ ನಂಬರ್ 21 ಬಸ್ನ ಚಾಲನಾಗಿದ್ದು, ಶನಿವಾರ ರಾತ್ರಿ ಬಸ್ನ್ನು ಪಾಲ್ದನೆ ಚರ್ಚ್ ಬಳಿ ನಿಲ್ಲಿಸಿ ತನ್ನ ಮನೆಗೆ ಹೋಗಲು ಸ್ನೇಹಿತ ಹರೀಶ್ಗೆ ಕಾಯುತ್ತಿದ್ದರು. ಅಲ್ಲೇ ಮೂತ್ರಶಂಕೆಗೆಂದು ಹೋದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಏಳು ಮಂದಿ ದುಷ್ಕರ್ಮಿ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡ ಪ್ರಸನ್ನರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನ ಬೈಕ್ನಲ್ಲಿ ಬಂದವರ ಪೈಕಿ ಓರ್ವನ ಹೆಸರು ರಾಜು ಯಾನೆ ಜಪಾನ್ ಮಂಗ ಎಂದು ಸ್ನೇಹಿತನಿಗೆ ಹೇಳಿದ್ದನು. ನೀರುಮಾರ್ಗದ ಕೋಟಿಪುರ ನಿವಾಸಿ ರಜನೀಶ್ ಜತೆ ಪ್ರಸನ್ನ ಹಣಕಾಸು ವ್ಯವಹಾರ ಹೊಂದಿದ್ದನು.
ಕೆಲವು ದಿನ ಹಿಂದೆ ಇವರಿಬ್ಬರ ಮಧ್ಯೆ ಹಣಕಾಸು ವಿಚಾರದಲ್ಲಿ ಹೊಡೆದಾಟ ನಡೆದಿತ್ತು. ಇದೇ ದ್ವೇಷದಿಂದ ರಜನೀಶ್ ತನ್ನ ಸಹಚರ ರಾಜುಗೆ ತಿಳಿಸಿ ಕೊಲೆ ಮಾಡಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಕರೆಸಲಾಗಿದ್ದು, ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
--