ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರಾಚೀನ ವಸ್ತುಗಳಿದ್ದರೆ ಇಲ್ಲಿಗೆ ನೀಡಿ

Lingaraj Badiger
Updated On : 20 May 2013, 11:44 am

ಮಂಗಳೂರು: ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಮೇ 18ರಿಂದ 24ರ ವರೆಗೆ ನಗರದ ಬಿಜೈನ ಶ್ರೀಮಂತಿಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕ್ಯೂರೇಟರ ಕಚೇರಿಯಲ್ಲಿ ವಸ್ತು ಸಂಗ್ರಹಾಲಯ ಸಪ್ತಾಹ ಏರ್ಪಡಿಸಲಾಗಿದೆ. ಪ್ರಾಚೀನ ವಸ್ತುಗಳನ್ನು ಈ ಸಂದರ್ಭ ಸಂಗ್ರಹಿಸಲಾಗುತ್ತಿದ್ದು, ಪ್ರಾಚೀನ ಶಿಲಾಶಾಸನಗಳು, ವೀರಗಲ್ಲು, ಮಹಾಸತಿ ಕಲ್ಲು, ಪ್ರಾಚೀನ ಶಿಲ್ಪ, ತಾಳೆಗರಿ, ನಾಣ್ಯ, ಆಯುಧ, ಕಂಚಿನ ವಿಗ್ರಹಗಳಿದ್ದಲ್ಲಿ ವಸ್ತು ಸಂಗ್ರಹಾಲಯಕ್ಕೆ ನೀಡಬಹುದು. ವಿವರಕ್ಕೆ 0824-2211106ನ್ನು ಸಂಪರ್ಕಿಸಬಹುದು.
ಮಲ್ಪೆ: ಬೋಟ್ ಮಗುಚಿ ಮಗು ಸಮುದ್ರಪಾಲು
ಮಲ್ಪೆ: ಇಲ್ಲಿನ ಸಮುದ್ರ ತೀರದಲ್ಲಿ ಬೋಟ್ ಮಗುಚಿ ಮಗು ಸಮುದ್ರ ಪಾಲಾದ ಘಟನೆ ಭಾನುವಾರ ನಡೆದಿದೆ. ದೊಡ್ಡಬಳ್ಳಾಪುರದ ನಿವಾಸಿ ಪ್ರಸನ್ನ ಎಂಬವರ ಮಗು ಹಿತೇಶ್ ಗೌಡ (2) ಸಮುದ್ರ ಪಾಲಾದ ಮಗು. ಘಟನೆ ವಿವರ:  ಭಾನುವಾರ ಪ್ರಸನ್ನ ಅವರು ತಮ್ಮ 10 ಮಂದಿ ಸಂಬಂಧಿಕರೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಮಲ್ಪೆ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಸಂಜೆ ಸುಮಾರು 6 ಗಂಟೆಗೆ ಬಾಡಿಗೆ ಸ್ಪೀಡ್ ಬೋಟ್ನಲ್ಲಿ ಹತ್ತು ಮಂದಿ ಸಮುದ್ರದಲ್ಲಿ 1 ಸುತ್ತು ಹೊಡೆದು, ಸ್ಥಳಕ್ಕೆ ಬಂದು ಇಳಿಯುವಾಗ ಈ ದುರಂತ ನಡೆದಿದೆ. ಭಾನುವಾರ ಸಮುದ್ರ ಎಂದಿಗಿಂತಲೂ ಉಗ್ರವಾಗಿತ್ತು. ಭಾರಿ ಅಲೆಯೊಂದು ಬೋಟಿಗೆ ಹೊಡೆದು ಬೋಟು ತಲೆಕೆಳಗಾಯಿತು. ಬೋಟ್ನಲ್ಲಿದ್ದ ಎಲ್ಲಾ 10 ಮಂದಿ ಸಮುದ್ರಕ್ಕೆ ಬಿದ್ದರು. ತಕ್ಷಣ ಬೋಟ್ನ ಚಾಲಕ ಮತ್ತು ಸ್ಥಳದಲ್ಲಿದ್ದ ತಮಿಳು ಮೀನುಗಾರರು ಧಾವಿಸಿ ಪ್ರಸನ್ನ ಮತ್ತಿತರರನ್ನು ಬದುಕಿಸಿದ್ದಾರೆ. ಆದರೆ, ತಾಯಿಯ ಕೈಯಲ್ಲಿದ್ದ ಮಗು ನೀರಿಗೆ ಬಿದ್ದಾಗ ಕೈ ತಪ್ಪಿದ್ದು, ಎಷ್ಟು ಹುಡುಕಾಡಿದರೂ ಸಿಗಲಿಲ್ಲ.  ಸ್ಥಳಕ್ಕೆ ಮಲ್ಪೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.
ವಾಲಿಬಾಲ್, ಕಬಡ್ಡಿ ಉಚಿತ ತರಬೇತಿ ಸಂಪನ್ನ
ಸುಬ್ರಹ್ಮಣ್ಯ:  ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸದಾ ಮುಂಚೂಣಿಯಲ್ಲಿರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವು ಕ್ರೀಡಾಕ್ಷೇತ್ರದಲ್ಲೂ ತನ್ನ ವಿಶೇಷ ಛಾಪನ್ನು ನೀಡಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟದ ತನಕ ಕೊಂಡೊಯ್ಯುವ ಸದುದ್ದೇಶದಿಂದ ದೇಶಿಯ ಕ್ರೀಡೆಯಾದ ವಾಲಿಬಾಲ್ ಮತ್ತು ಕಬಡ್ಡಿ ಕ್ರೀಡಾ ತರಬೇತಿ ಶಿಬಿರ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ 15 ದಿನಗಳಿಂದ ನಡೆದ ಶಿಬಿರದಲ್ಲಿ ಸುಮಾರು 140ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸ್ಥಳೀಯ ಕ್ರೀಡಾಸಕ್ತ ಸಾರ್ವಜನಿಕರು ಭಾಗವಹಿಸಿ, ಅಂತಾರಾಷ್ಟ್ರೀಯ ವಾಲಿಬಾಲ್ ತರಬೇತುದಾರ ನಾರಾಯಣ ಆಳ್ವ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಮಾಧವ ಬಿ.ಕೆ. ಅವರ ಗರಡಿಯಲ್ಲಿ ತರಬೇತಿ ಪಡೆದುಕೊಂಡರು. ಶಿಬಿರದಲ್ಲಿ ಸುಮಾರು ಹತ್ತು ಗಂಟೆಗಳ ಕಾಲ ಕಠಿಣ ತಾಲೀಮು, ವಿವಿಧ ವ್ಯಾಯಾಮಗಳು, ಕಬಡ್ಡಿ ಹಾಗೂ ವಾಲಿಬಾಲ್ ಆಟದೊಂದಿಗೆ ಅದರ ನೈಪುಣ್ಯತೆ, ಚಾಕಚಕ್ಯತೆಗಳನ್ನು ಮನನ ಮಾಡಿಕೊಡಲಾಗಿದೆ. ಶಿಬಿರದಲ್ಲಿ 10 ವರ್ಷದಿಂದ ಹಿಡಿದು 40 ವರ್ಷದ ಶಿಬಿರಾರ್ಥಿಗಳಿದ್ದರು. ಗ್ರಾಮೀಣ ಪ್ರದೇಶದ ಸುಮಾರು 140ಕ್ಕೂ ಅಧಿಕ ಹಿರಿ-ಕಿರಿಯ ಕ್ರೀಡಾಳುಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement