ಶಂಕರರ ತತ್ವಸಿದ್ಧಾಂತ ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ: ವೆಂಕಟೇಶ ಪ್ರಸನ್ನ
ಮಂಗಳೂರು: ಶಂಕರಾಚಾರ್ಯರ ತತ್ವಸಿದ್ಧಾಂತ ಪಾಲಿಸಿದರೆ ಜಗತ್ತಿನೆಲ್ಲೆಡೆ ಶಾಂತಿ ನೆಲೆಸಲು ಸಾಧ್ಯ ಎಂದುಮಂಗಳೂರು ಸಿಸಿಬಿ (ನಗರ ಅಪರಾಧ ಪತ್ತೆ ವಿಭಾಗ) ಇನ್ಸ್ಪೆಪೆಕ್ಟರ್ ವೆಂಕಟೇಶ್ ಪ್ರಸನ್ನ ಹೇಳಿದ್ದಾರೆ.
ದ.ಕ.ಜಿಲ್ಲಾ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಭಾನುವಾರ ನಗರದ ಸುಬ್ರಹ್ಮಣ್ಯ ಸಭಾದಲ್ಲಿ ನಡೆದ ಜಿಲ್ಲಾ 'ಶಂಕರ ಜಯಂತಿ' ಉತ್ಸವದಲ್ಲಿ ಶ್ರೀಶಾಂಕರತತ್ವ ಮತ್ತು ಸಂದೇಶ ಪ್ರವಚನ ನೀಡಿದರು.
ಅದ್ವೈತದೊಳಗೆ ಭೇದವಿಲ್ಲ, ಗೊಂದಲವೂ ಇಲ್ಲ ಎಂದ ಅವರು, ಪ್ರಪಂಚಕ್ಕೆ ನಾವೆಲ್ಲರೂ ಒಂದೇ ಎಂಬ ತತ್ವ ಸಾರಿದ್ದು ಶಂಕರರು. ಶಂಕರರಿಗಿಂತ ಮೊದಲೇ ಗೌಡ ಪಾದಾಚಾರ್ಯರು ಅದ್ವೈತ ಸಿದ್ಧಾಂತ ಪ್ರತಿಪಾದಿಸಿದ್ದರು. ಇದನ್ನು ಪ್ರಚುರಪಡಿಸಿದ್ದು ಶಂಕರರು. ಜೀವ ಮತ್ತು ಬ್ರಹ್ಮ ಬೇರೆ ಅಲ್ಲ, ಒಂದೇ ಎಂದು ಸಾರಿದವರು ಶಂಕರರು ಎಂದರು.
ಶೃಂಗೇರಿಯ ಶಾಂಕರ ತತ್ವ ಪ್ರಸಾರ ಅಭಿಯಾನಂ ಜಿಲ್ಲಾ ಸಂಚಾಲಕ ಬೆಳ್ಳೆ ಕರುಣಾಕರ ರಾವ್, ಅಧ್ಯಕ್ಷ ಎಂ.ಆರ್.ವಾಸುದೇವ, ಉಪಾಧ್ಯಕ್ಷ ಡಾ.ಜಿ.ಎನ್.ಭಟ್ ಹಾಜರಿದ್ದರು.
ಇದಕ್ಕೂ ಮುನ್ನ ಮಂಗಳೂರಿನ ಶ್ರೀವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನಾ ಕೇಂದ್ರದಿಂದ ಶತರುದ್ರಾಭಿಷೇಕ, ಬಳಿಕ ಭಜನೆ, ಮಹಾಮಂಗಳಾರತಿ, ಶಾಂಕರ ಪರಂಪರೆ ಕುರಿತು ರಸಪ್ರಶ್ನೆ, ಸಮಾರೋಪ ಜರುಗಿತು.