ಸಹಪಾಠಿಗಳ ಪ್ರೀತಿಯ ನಾಯಕಗೆ ಮತ್ತೆ ಸಚಿವ ಪಟ್ಟ
-ಮೌನೇಶ ವಿಶ್ವಕರ್ಮ
ಬಂಟ್ವಾಳ: ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ಗೆದ್ದು ಗೌರವಕ್ಕೆ ಪಾತ್ರರಾದ ಬಿ. ರಮಾನಾಥ ರೈ ಶನಿವಾರ ರಾಜ್ಯ ಸಚಿವ ಸಂಪುಟ ಸಚಿವರಾಗಿ ಅಧಿಕಾರ ವಹಿಸುತ್ತಲೇ ಬಂಟ್ವಾಳದ ಜನತೆಯ ಸಂಭ್ರಮ ಮುಗಿಲು ಮುಟ್ಟಿದೆ. ಐದು ಬಾರಿ ಬಂಟ್ವಾಳದಲ್ಲಿ ಶಾಸಕರಾಗಿದ್ದ ರೈ 6ನೇ ಬಾರಿ ಆಯ್ಕೆಯಾದರೆ ಮಂತ್ರಿಯಾಗುತ್ತಾರೆ ಎಂಬ ಚುನಾವಣಾ ಪ್ರಚಾರ ಸಭೆಯ ಮಾತುಗಳು ಈಗ ನಿಜವಾಗಿದೆ.
ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ರಮಾನಾಥ ರೈ ಅವರದ್ದು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನ. ನಾರಾಯಣ ರೈ ಹಾಗೂ ಗಿರಿಜಾ ದಂಪತಿಯ 5ನೇ ಪುತ್ರನಾಗಿ 1952 ಮಾ.8ರಂದು ಇವರು ಜನಿಸಿದರು.
ಸಹಪಾಠಿಗಳ ಪ್ರೀತಿಯ ನಾಯಕ: ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡ ರೈ, ಸಹಪಾಠಿಗಳ ಪ್ರೀತಿಯ ನಾಯಕರಾಗಿದ್ದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದ ರೈ ಅವರಲ್ಲಿ ಅಡಗಿದ್ದ ನಾಯಕತ್ವದ ಗುಣಗಳು ಆಗಲೇ ಹೊರಹೊಮ್ಮಿದ್ದವು.
ರಾಜಕೀಯ ನಂಟು: ಬಿಸಿರಕ್ತದ ಯುವಕನಾಗಿದ್ದಾಗಲೇ ಇವರ ಮೇಲೆ ಕಾಂಗ್ರೆಸ್ ಚಳುವಳಿ ಪ್ರಭಾವ ಬೀರಿತ್ತು. ವಿಶ್ವವಿದ್ಯಾನಿಲಯ ಮಟ್ಟದ ಸರ್ವಕಾಲೇಜು ವಿದ್ಯಾರ್ಥಿ ಸಂಘದಲ್ಲಿ ಸಕ್ರಿಯನಾಗಿ ತೊಡಗಿಸಿಕೊಂಡ ಕಾಲಘಟ್ಟದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೇಶವ ರೆಡ್ಡಿ ಅವರನ್ನು ಭೇಟಿ ಮಾಡಿದ್ದು, ಇವರನ್ನು ಸಂಘಟನಾ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಯಿತು.
ಪದವಿ ವಿದ್ಯಾಭ್ಯಾಸ ಬಳಿಕ ರಾಜಕೀಯ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡ ರಮಾನಾಥ ರೈ, ಬಂಟ್ವಾಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಳಿಕ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಯುವ ಕಾಂಗ್ರೆಸ್ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸಾಮಾಜಿಕ ಒಡನಾಟ: ಪಕ್ಷದ ಮೂಲಕ ಜನಸಂಪರ್ಕ ನಡೆಸುತ್ತಿದ್ದ ರೈ, ಸಾರ್ವಜನಿಕ ಸೇವೆ ಪ್ರಾರಂಭಿಸಿದ್ದು ಬಂಟ್ವಾಳ ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗುವ ಮೂಲಕ. ಕೃಷಿಕರು, ಜನಸಾಮಾನ್ಯರೊಂದಿಗೆ ಬೆರೆತು, ಅವರ ಸಮಸ್ಯೆಗೆ ಸ್ಪಂದಿಸಿ, ಅವರ ಪ್ರೀತಿ- ವಿಶ್ವಾಸ ಗಳಿಸಿಕೊಂಡ ದಿನಗಳು ಇವರ ರಾಜಕೀಯ ಒಡನಾಟಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.
ರೈ ಹೆಗ್ಗಳಿಕೆ: ಮೀನುಗಾರಿಕಾ ಇಲಾಖೆ ಸಚಿವರಾಗಿದ್ದಾಗ ಕ್ಷೇತ್ರದ ಜೀವನಾಡಿಯಾಗಿದ್ದ ಅಸಂಘಟಿತ ಮೀನುಗಾರರನ್ನು ಒಂದುಗೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮತ್ಸ್ಯಾಶ್ರಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದು, ಪ್ರತಿ ಮನೆ ನಿರ್ಮಾಣಕ್ಕೆ ತಲಾ ರು. 40 ಸಾವಿರ ನೀಡಿ ಮೀನು ಮಾರಾಟಗಾರರ ಬದುಕಿನಲ್ಲಿ ಬೆಳಕು ಮೂಡಿಸುವ ಕಾರ್ಯದಲ್ಲಿ ಶ್ರಮಿಸಿದ್ದರು. ಮಾರ್ಗರೆಟ್ ಆಳ್ವ ಕೇಂದ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಕಾಲದಲ್ಲಿ ಬಂಟ್ವಾಳ ತಾಲೂಕಿನಲ್ಲಿ ರೈ ಅವರ ವಿಶೇಷ ಮುತುವರ್ಜಿಯಲ್ಲಿ ಸುಮಾರು 500ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಸ್ಥಾಪನೆಯಾಗಿತ್ತು. ಆ ಮೂಲಕ ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ ಎರಡನೇ ತಾಲೂಕು ಎಂಬ ಹೆಗ್ಗಳಿಕೆಗೆ ಬಂಟ್ವಾಳ ಪಾತ್ರವಾಗಿದೆ.
ಪಕ್ಷ ಸಂಘಟನೆ: ರಮಾನಾಥ ರೈ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ನಡಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಸಂಘಟಿಸಿದವರು. ಮಂಗಳೂರು ವಿವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಂಸ್ಥಾಪಕರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ, ರಾಜ್ಯ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಪ್ರಸ್ತುತ ಹಲವು ವರ್ಷಗಳಿಂದ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
--