38 ಮಂದಿಗೆ ವಿಶೇಷ ವಸತಿ
ಮಂಗಳೂರು: ಮಂಗಳೂರಿನ ಇಬ್ಬರು ಮತ್ತು ಬೆಳ್ತಂಗಡಿಯ 36 ಮಂದಿಗೆ ಜಿಲ್ಲಾಡಳಿತ ವಸತಿ ಮಂಜೂರು ಮಾಡಿದೆ. ಜಿಲ್ಲಾಧಿಕಾರಿ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸೋಮವಾರ ಡೆದ ಸಭೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಯಾವುದೇ ಯೋಜನೆಯಡಿ ಮನೆ ಪಡೆಯದವರನ್ನು ಆಯ್ಕೆ ಮಾಡಲಾಯಿತು.
ಬಸವ ವಸತಿ ಯೋಜನೆ, ಆಶ್ರಯ, ಅಂಬೇಡ್ಕರ್ ಮುಂತಾದ ವಸತಿ ಯೋಜನೆಯಡಿ ಮನೆ ಪಡೆಯದ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲರು, ಕುಷ್ಟರೋಗದಿಂದ ಗುಣಮುಖರಾದವರು, ಅರಣ್ಯ ಪ್ರದೇಶದಿಂದ ಹಾಗೂ ಅತಿಕ್ರಮಣದಿಂದ ತೆರವುಗೊಳಿಸಲಾದ ನಿರಾಶ್ರಿತರು, ಪ್ರವಾಹ ಪೀಡಿತರು, ದೇವದಾಸಿಯರು, ದೌರ್ಜನ್ಯಕ್ಕೊಳಗಾದ ಮಹಿಳೆಯು, ಅಂಗನವಾಡಿ ಕಾರ್ಯಕರ್ತೆಯರು ಗಲಭೆಗಳಿಂದ ಸಂತ್ರಸ್ತರಾದವರು, ನೇಕಾರರು, ಹಮಾಲರು, ಬೀಡಿ ಕಾರ್ಮಿಕರು, ಕುಶಲಕರ್ಮಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕೊರಗರಿಗೆ ಮನೆ ನೀಡುವ ಬಗ್ಗೆ ಘನತ್ಯಾಜ್ಯ ವಿಲೇಗೆ ಜಾಗ ಕಾಯ್ದಿರಿಸುವ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಸಭೆಯಲ್ಲಿ ಪ್ರಸ್ತಾಪಿಸಿದರು. ಕಂದಾಯ ಅಧಿಕಾರಿಗಳ ಸಭೆಯಲ್ಲಿ ಆದ್ಯತೆ ಮೇರೆಗೆ ವಿಷಯ ಪ್ರಸ್ತಾಪಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಕೆ.ಎ., ಮುಖ್ಯ ಯೋಜನಾಧಿಕಾರಿ ನಝೀರ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಪುಟಾರ್ಡೊ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಸುದರ್ಶನ್ ಸಭೆಯಲ್ಲಿದ್ದರು.