ಕೊಳೆತು ನಾರುವ ಮಾರುಕಟ್ಟೆಗೆ ಆರೋಗ್ಯ ಸಚಿವ ಖಾದರ್, ಶಾಸಕ ಲೋಬೊ ಭೇಟಿ
ಮಂಗಳೂರು: ಆರೋಗ್ಯ ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸೆಂಟ್ರಲ್ ಮಾರುಕಟ್ಟೆಗೆ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಜೆ.ಆರ್.ಲೋಬೊ ಕೂಡಾ ಪ್ರತ್ಯೇಕವಾಗಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಕೇಂದ್ರ ಮಾರುಕಟ್ಟೆ ಪ್ರದೇಶ ಕೊಳೆತು ನಾರುತ್ತಿದೆ. ಶೌಚಾಲಯ ಗಬ್ಬು ವಾಸನೆ, ಕೊಳಚೆಗುಂಡಿಗಳ ರಾಶಿ. ಇದನ್ನು ಕಣ್ಣು ತೆರೆದು ನೋಡುತ್ತಾ ಶಾಸಕ ಲೋಬೊ, ಮೂಗು ಮುಚ್ಚಿಕೊಂಡೇ ಒಳಪ್ರವೇಶಿಸಿ ಅವ್ಯವಸ್ಥೆ ಖುದ್ದು ಪರಿಶೀಲಿಸಿದರು.
'ಮಾರುಕಟ್ಟೆ ಪ್ರದೇಶದಲ್ಲಿ ಸಮಸ್ಯೆಗಳಿವೆ. ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಬೇಕಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಸೇರಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸುಸಜ್ಜಿತ ಮಾರುಕಟ್ಟೆ ಮಾಡುವತ್ತ ಪ್ರಯತ್ನಿಸಲಾಗುವುದು' ಎಂದು ಶಾಸಕ ಲೋಬೊ ಭರವಸೆ ನೀಡಿದರು.
ಸರಿಪಡಿಸುವುದು ಸವಾಲು: ಖಾದರ್
ಸಚಿವ ಯು.ಟಿ. ಖಾದರ್ ಮೀನು ಮಾರುಕಟ್ಟೆ ಮತ್ತು ಸೆಂಟ್ರಲ್ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದರು. ಜನರ ಯೋಗಕ್ಷೇವು ವಿಚಾರಿಸಿ, ಬೆಂಬಲಿಸಿದಕ್ಕೆ ಕೃತಜ್ಞತೆ ಅರ್ಪಿಸಿದರು. ಎಲ್ಲೆಂದರಲ್ಲಿ ಎಸೆಯಲಾದ ತರಕಾರಿ ತ್ಯಾಜ್ಯ, ಕೊಳೆತು ನಾರುತ್ತಿರುವ ಮಾರುಕಟ್ಟೆಗೆ ಸೋಮವಾರ ಬೆಳಗ್ಗೆ ಸಚಿವರು ಕಾಲಿಟ್ಟರು. ಮಾರುಕಟ್ಟೆಗೆ ಬರುವವರಿಗೆ ಮಾತ್ರವಲ್ಲ ರಸ್ತೆಯಲ್ಲಿ ನಡೆಯುವವರಿಗೂ ಸಂಕಷ್ಟ ಆಗುತ್ತಿರುವುದನ್ನು ಮನಗಂಡ ಖಾದರ್, 'ಇದನ್ನು ಸರಿಪಡಿಸುವುದು ನನಗೊಂದು ಸವಾಲೇ ಸರಿ' ಎಂದರು. 'ತ್ಯಾಜ್ಯ ವಿಲೇವಾರಿ ಮಾಡುವ ಹೊಣೆ ಮಹಾನಗರ ಪಾಲಿಕೆಯದ್ದು, ತ್ಯಾಜ್ಯ ಹೆಚ್ಚಾಗಿ ರೋಗಾಣುಗಳು ಹುಟ್ಟಿ ಸಾಂಕ್ರಾಮಿಕ ರೋಗಗಳು ಬರಬಹುದು. ನಾನು ಆರೋಗ್ಯ ಸಚಿವನಾಗಿರುವುದರಿಂದ ಇದು ನನಗೆ ಸವಾಲು' ಎಂದರು.