ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪುತ್ತೂರು: 2 ದಿನಗಳಿಗೊಮ್ಮೆ ನೀರು ಪೂರೈಕೆ

Lingaraj Badiger
Updated On : 21 May 2013, 11:49 am

ಪುತ್ತೂರು:  ಬೇಸಗೆಯ ಬಿರು ಬಿಸಿಲು ಹೆಚ್ಚಾಗುತ್ತಿದ್ದಂತೆ ಪುತ್ತೂರು ನಗರ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ಹೆಚ್ಚಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಎರಡು ದಿನಗಳಿಗೊಮ್ಮೆ ನೀರು: ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಎರಡು  ದಿನಗಳಿಗೊಮ್ಮೆ ಕುಡಿಯುವ ನೀರು  ಸರಬರಾಜು ಮಾಡಲಾಗುತ್ತಿದೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಪುತ್ತೂರು ನಗರದಲ್ಲಿ ನೀರಿನ ಕೊರತೆ ಉಂಟಾಗುತ್ತಿರುವುದು ಸಾಮಾನ್ಯವಾಗಿದೆ. ಪುರಸಭಾ ವ್ಯಾಪ್ತಿಯಲ್ಲಿರುವ ಬೊರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಆಳಕ್ಕೆ ಹೋಗಿರುವ ಕಾರಣ ಜನರಿಗೆ ನಿರಂತರ ನೀರು ಪೂರೈಕೆ ಮಾಡಲು ತೊಡಕಾಗಿದೆ.
ಬೋರ್‌ವೆಲ್‌ಗಳಿಂದ ಪೂರೈಕೆ: ಪುರಸಭೆಯ ನೀರಿನ ಬವಣೆ ನೀಗಿಸಲು ಎಡಿಬಿ ಯೋಜನೆಯಡಿ ಉಪ್ಪಿನಂಗಡಿಯ ಕುಮಾರಧಾರಾ ನದಿಯಿಂದ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದ್ದು ಇದರೊಂದಿಗೆ ಸುಮಾರು 84 ಬೋರ್‌ವೆಲ್‌ಗಳಿಂದ ನೀರು ವಿತರಿಸಲಾಗುತ್ತಿದೆ. ಇಲ್ಲಿನ ಜನರ ಬೇಡಿಕೆಗೆ ಅನುಗುಣವಾಗಿ 12 ಬೋರ್‌ವೆಲ್‌ಗಳ ಬೇಡಿಕೆಯಿದ್ದು ಆದರೆ ಈ ತನಕ ಸ್ಥಳೀಯರ ಬೇಡಿಕೆ ಈಡೇರಿಸಲಾಗಿಲ್ಲ ಎಂಬ ಅಭಿಪ್ರಾಯ ಪುರಸಭಾ ನೂತನ ಸದಸ್ಯರಿಂದ ವ್ಯಕ್ತವಾಗಿದೆ.
60-70 ಲಕ್ಷ ಲೀ.ಗೆ ಬೇಡಿಕೆ: ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ ಸರಾಸರಿ  60-70 ಲಕ್ಷ ಲೀಟರ್‌ನ ಬೇಡಿಕೆಗಳಿವೆ. ಪುರಸಭಾ ವ್ಯಾಪ್ತಿಯಲ್ಲಿ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 11 ಸಾವಿರ ಕುಟುಂಬಗಳಿದ್ದು ಈ ಪೈಕಿ ಒಟ್ಟು 8300 ಮನೆಗಳಿಗೆ ನೀರಿನ ಸಂಪರ್ಕಗಳಿವೆ. ಅಲ್ಲದೆ 80 ಶಾಲೆಗಳಿಗೆ ಹಾಗೂ ಬಿಸಿಯೂಟದ ಸಂಪರ್ಕಗಳಿವೆ.  
ಪೂರೈಕೆ ಅಸಮರ್ಪಕ: ಕೂರ್ನಡ್ಕ ,ಸಾಮೆತ್ತಡ್ಕ, ಕಾರೆಕ್ಕಾಡು, ಸೀಟಿಗುಡ್ಡೆ, ಸಾಲ್ಮರ, ಆನಂದಾಶ್ರಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರಿನ ಬವಣೆಗಳಿದ್ದು, ಈ ಪ್ರದೇಶದ ಸುಮಾರು 2500 ಮನೆಗಳಿಗೆ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂದು ತಿಳಿದು ಬಂದಿದೆ.
ನಗರದ ನೀರಿನ ಸಮಸ್ಯೆಗಳಿರುವ ಕಡೆಗಳಿಗೆ ಪುರಸಭೆಯ ವತಿಯಿಂದ ಟ್ಯಾಂಕರ್ ಮೂಲಕ ನೀರು  ಪೂರೈಕೆ ಮಾಡಲಾಗುತ್ತಿದೆ. ಈ ಮೂಲಕ ಪುರಸಭೆಯು ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಕೊಳವೆ ಬಾವಿ ಮೂಲಕ ಮನೆ ಮನೆಗೆ ಸರಬರಾಜು ಆಗುವ ನೀರು ದರ್ಬೆ ಹಾಗೂ ಇನ್ನಿತರ ಕೆಲವು ಕಡೆಗಳಲ್ಲಿ ಕೆಸರುಮಯವಾಗಿದೆ. ಕೊಳವೆ ಬಾವಿಯಲ್ಲಿ ನೀರು ಆಳಕ್ಕೆ ಹೋಗಿರುವುದರಿಂದ ಕೆಸರು ಸಹಿತ ನೀರು ಮೇಲಕ್ಕೆ ಬರುತ್ತಿರುವುದರಿಂದ ಈ ಸಮಸ್ಯೆಯಾಗಿದೆ ಎಂದು  ದರ್ಬೆ ಪ್ರದೇಶದ ಜನರು ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲೂ ತೀರದ ಸಮಸ್ಯೆ
ಇದು ಕೇವಲ ಪುರಸಭಾ ಸಮಸ್ಯೆ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳಾದ ತಿಂಗಳಾಡಿ, ಈಶ್ವರಮಂಗಲ, ಕೋಡಿಂಬಾಡಿ, ಆರ್ಯಾಪು, ನರಿಮೊಗರು, ಸವಣೂರು ಸೇರಿದಂತೆ ಬಹುತೇಕ ಪಂಚಾಯಿತಿಗಳ ಕೆಲವು ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳಿವೆ ಎಂದು ತಿಳಿದು ಬಂದಿದೆ.
ಮಳೆ ಪ್ರಮಾಣ ಕಡಿಮೆ: ಪ್ರತಿ ವರ್ಷ ಏಪ್ರಿಲ್‌ನಲ್ಲಿ ಆಗಮಿಸುವ ಮಳೆ ಸ್ಪಲ್ಪ ಮಟ್ಟಿಗೆ ನೀರಿನ ಸಮಸ್ಯೆ ನೀಗಿಸುತ್ತಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಹಾಗೂ ನೀರಿನ ಅಂತರ್ಜಲ ಮಟ್ಟ ಆಳಕ್ಕೆ ಹೋಗಿರುವುದು ನೀರಿನ ಸಮಸ್ಯೆಗೆ ಕಾರಣ ಎಂಬುದು ಜನರ ಅಭಿಪ್ರಾಯ. ಇದರೊಂದಿಗೆ ಹೆಚ್ಚುತ್ತಿರುವ ಮನೆಗಳು, ಜನಸಂಖ್ಯೆಗಳು ಹಾಗೂ ವಾಹನಗಳು ಇನ್ನಿತರ ಕಾರಣಗಳಿಂದ ನೀರಿನ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಮಾಡುವಲ್ಲಿ ತೊಡಕಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಲಾರಂಭಿಸಿರುವಾಗಲೇ ಪುರಸಭೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಜನರ ಮೂಲಭೂತ ಸಮಸ್ಯೆಯಾಗಿರುವ ನೀರಿನ ಸಮಸ್ಯೆ ನೀಗಿಸುವಲ್ಲಿ ಶ್ರಮಿಸುತ್ತಿವೆ.
-ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement