ಆರ್‌ಟಿಸಿಗೆ ಪರದಾಟ: ಪಂಜ ಕಂದಾಯ ಕಚೇರಿ ಎದುರು ಧರಣಿ
ಸುಳ್ಯ: ಕೆಲವು ದಿನಗಳಿಂದ ಪಂಜ ಕಂದಾಯ ಕಚೇರಿಯಲ್ಲಿ ಆರ್‌ಟಿಸಿ ದೊರೆಯದ ಕಾರಣ ಪಂಜ ಪರಿಸರದ ಜನರು ಕಚೇರಿ ಎದುರು ಧರಣಿ ನಡೆಸಿದರು. ಪಂಜ ಕಂದಾಯ ಕಚೇರಿಯ ಕಂಪ್ಯೂಟರ್‌ನಲ್ಲಿ ಆರ್‌ಟಿಸಿ ಸಾಫ್ಟ್‌ವೇರ್ ದೋಷದಿಂದ ವಾರದಿಂದೀಚೆಗೆ ಆರ್‌ಟಿಸಿ ದೊರಕದೆ ಜನತೆ ತೊಂದರೆ ಅನುಭವಿಸುತ್ತಿದ್ದರು. ವಿಷಯ ತಿಳಿದ ತಾ.ಪಂ. ಮಾಜಿ ಅಧ್ಯಕ್ಷೆ ಸುವರ್ಣಿನಿ ಎನ್.ಎಸ್, ಪಂಜ ಗ್ರಾ.ಪಂ. ಸದಸ್ಯರಾದ ಕಾರ್ಯಪ್ಪ ಗೌಡ ಚಿದ್ಗಲ್ಲು, ಲೋಕೇಶ್ ಬರೆಮೇಲು, ರವಿ ಬಿ. ನಾಗತೀರ್ಥ ಮೊದಲಾದವರು ಕಚೇರಿ ಎದುರು ಕುಳಿತು ಆರ್‌ಟಿಸಿ ಸಿಗುವತನಕ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಧರಣಿ ನಡೆಸಿದರು. ಈ ವೇಳೆ ಕಚೇರಿಯಲ್ಲಿದ್ದ ಅಧಿಕಾರಿ ಗಂಗಾಧರ, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ನಂತರ ಕಚೇರಿಯ ಕಂಪ್ಯೂಟರ್‌ನಲ್ಲಿ ಆರ್‌ಟಿಸಿ ಸಾಫ್ಟ್‌ವೇರ್ ದೋಷವನ್ನು ಆನ್‌ಲೈನ್ ಮೂಲಕ ಸರಿಪಡಿಸಿಕೊಟ್ಟರು. ಮಧ್ಯಾಹ್ನ ವೇಳೆಗೆ ಆರ್‌ಟಿಸಿ ನೀಡಲು ಆರಂಭಿಸಿದಾಗ ಧರಣಿ ಕೈ ಬಿಡಲಾಯಿತು.