ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಡೋ ಪುನರ್ವಸತಿ ಕೇಂದ್ರಕ್ಕೆ ಆರೋಗ್ಯ ಸಚಿವ ಭೇಟಿ

Rashmi Kasaragodu
Updated On : 22 May 2013, 12:00 pm

ಉಪ್ಪಿನಂಗಡಿ: ಎಂಡೋ ಸಲ್ಫಾನ್ ಪೀಡಿತರಾಗಿ ನರಕಯಾತನೆ ಅನುಭವಿಸುವ ಮಂದಿಯ ಬಗ್ಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿರುವ ಯಾವುದೇ ಬಗೆಯ ಸಮೀಕ್ಷೆಯ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಮುಂದಿನ ಒಂದು ತಿಂಗಳ ಒಳಗಾಗಿ ಈಗಾಗಲೇ ಮಾಡಿರುವ ಎಲ್ಲ ಬಗೆಯ ಸಮೀಕ್ಷೆಗಳ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶಿಸಿದರು.
 ಅವರು ಮಂಗಳವಾರ ಕೊಕ್ಕಡದ ಎಂಡೋಸಲ್ಫಾನ್ ಪೀಡಿತರ ಪುನರ್ ವಸತಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಪೀಡಿತರ ಬವಣೆಗಳನ್ನು ಪರಿಶೀಲಿಸಿದರು.
 ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ಬಹಳಷ್ಟು ಚರ್ಚೆಗಳಾಗಿದೆ. ಅನೇಕಾನೇಕ ಸಮೀಕ್ಷೆಗಳು ನಡೆದಿದೆ. ಆದರೆ ಪೀಡಿತರ ಕಲ್ಯಾಣದ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರದ ಬಳಿಗೆ ಸಮೀಕ್ಷೆಯ ಅಂತಿಮ ವರದಿ ತಲುಪದಿದ್ದರೆ ಕ್ರಮ ಕೈಗೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಸಮೀಕ್ಷೆಗಳ ವರದಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಯಲ್ಲಿಡಲು ಸಮೀಕ್ಷೆ ನಡೆಸಿರುವುದಲ್ಲ. ಅದನ್ನು ತಕ್ಷಣವೇ ಸರ್ಕಾರಕ್ಕೆ ತಲುಪಿಸಬೇಕು. ಈ ಕಾರ್ಯಕ್ಕೆ ಗರಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದೆಂದು ತಿಳಿಸಿದ ಅವರು, ವರದಿ ಬಂದ ಬಳಿಕ ಸರ್ಕಾರದ ಮಟ್ಟದಲ್ಲಿ ವಿಚಾರ ವಿಮರ್ಶೆ ನಡೆಸಿ, ಉತ್ಕೃಷ್ಠವಾದ ಯೋಜನೆಯೊಂದು ಅನುಷ್ಠಾನವಾಗಲಿದೆ.
ನಮ್ಮ ಯೋಜನೆ ಹೋಲಿಕೆಗೆ ಸಿಲುಕದು: ಎಂಡೋ ಪೀಡಿತರಿಗೆ ಕೇರಳ ಮಾದರಿಯ ಪರಿಹಾರ ನೀಡುವ ಯೋಜನೆ ಇದೆಯೇ ಎಂಬ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮದು ಬೇರಾವ ರಾಜ್ಯದ ಯೋಜನೆಯ ಅನುಕರಣೆಯಾಗುವುದಿಲ್ಲ. ಅದು ಈ ಪೀಡಿತರ ಬದುಕಿನಲ್ಲಿ ಬೆಳಕು ಮೂಡಿಸುವ ಉತ್ಕೃಷ್ಠ ಯೋಜನೆಯಾಗಿ, ಅನ್ಯ ರಾಜ್ಯದ ಯೋಜನೆಗಳಿಗೆ ಹೋಲಿಕೆ ಮಾಡಲಾಗದಂತಹ, ಕರ್ನಾಟಕದ ಮಾದರಿ ಎನ್ನುವಂತಹ ಯೋಜನೆಯೊಂದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಪ್ರತಿಭಟನೆಗಿಂತ ಪರಿಹಾರ ಮುಖ್ಯ: ಇದೇ ತಿಂಗಳಲ್ಲಿ ಎಂಡೋ ಪೀಡಿತರು ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಗಮನ ಸೆಳೆದಾಗ, ಉತ್ತರಿಸಿದ ಸಚಿವರು, ದಿನ ನಿತ್ಯದ ಬದುಕನ್ನೇ ಬಹಳ ಕಷ್ಟದಾಯಕವಾಗಿ ಕಳೆಯುವ ಎಂಡೋಸಲ್ಫಾನ್ ಪೀಡಿತರನ್ನು ದೂರದ ಬೆಂಗಳೂರಿಗೆ ಕರೆದೊಯ್ಯುದು ಸಮಸ್ಯೆಯನ್ನು ಅನುಭವಿಸುವುದಕ್ಕಿಂತ, ಸಾತ್ವಿಕ ಶೈಲಿಯಲ್ಲಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಸಾಧ್ಯಾಸಾಧ್ಯತೆಗಳನ್ನು ಮನವರಿಕೆ ಮಾಡಿಕೊಂಡು ಅಗತ್ಯ ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಬೇಕು. ಈ ಸಂಧರ್ಭದಲ್ಲಿ ಎಂಡೋ ಪೀಡಿತರ ಸಂಕಷ್ಟ ದೂರ ಮಾಡುವಲ್ಲಿ ರಾಜ್ಯ ಸರ್ಕಾರ ಕಾಳಜಿಯುಕ್ತ ಗಮನ ಹರಿಸುವುದೆಂದು ಖಚಿತಪಡಿಸಿದರು.
 ಸಚಿವರ ಭೇಟಿ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಹರೀಶ್ ಕುಮಾರ್, ವಾಸುದೇವ, ಸಾಹುಲ್ ಹಮೀದ್ ಕೆ.ಕೆ, ನಝೀರ್ ಮಠ, ಮೊದಲಾದವರು ಜೊತೆಗಿದ್ದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement