ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಡಿವ ನೀರು, ಮೂಲಸೌಕರ್ಯ ಗಮನ

Rashmi Kasaragodu
Updated On : 22 May 2013, 11:59 am

ಕೆಡಿಪಿ ಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಕುಡಿವ ನೀರು, ಅಂಗವಿಕಲರ ಅಭಿವೃದ್ಧಿ ಮತ್ತು ಎಂಡೋ ಪೀಡಿತರ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ವಿಶೇಷ ಗಮನಹರಿಸುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಛಕೊರಗಪ್ಪ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಲಸೇವಾ ನಿಯಂತ್ರಣದಂಥ ಕ್ರಮ ಕೈಗೊಳ್ಳಲಾಗಿದದ್ರೂ ಬೋರ್‌ವೆಲ್ ಕೊರೆಸುವಲ್ಲಿ, ಕೊರೆಸಿದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕೊಡಿಸಲು ಇನ್ನಷ್ಟು ಆಸಕ್ತಿಯಿಂದ ಕಾರ್ಯೋನ್ಮುಖವಾಗಬೇಕು ಎಂದರು.
ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಲ್ಲಿ ಕುಡಿವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕ ನೀರು ವಿತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ ಎಂದರು. ಬೆಳ್ತಂಗಡಿಯ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಇಳಂತಿಲದಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕ್ರಿಯಾ ಯೋಜನೆಯಡಿ 18 ಬೋರ್‌ವೆಲ್ ಕೊರೆಯಲಾಗುತ್ತಿದೆ ಎಂದು ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
ಬಂಟ್ವಾಳ ಕ್ಷೇತ್ರಕ್ಕೆ ರು. 19 ಲಕ್ಷ, ಪುತ್ತೂರಿಗೆ ರು. 5.10 ಲಕ್ಷ, ಮಂಗಳೂರಿಗೆ ರು. 6.40 ಲಕ್ಷ, ಕುಡಿವ ನೀರಿಗೆ ತುರ್ತು ಅನುದಾನ ನೀಡಲಾಗಿದೆ. ಬಂಟ್ವಾಳದಲ್ಲಿ 26 ಬೋರ್‌ವೆಲ್, ಪುತ್ತೂರಲ್ಲಿ 9, ಸುಳ್ಯದಲ್ಲಿ 11, ಮಂಗಳೂರಲ್ಲಿ 14 ಬೋರ್‌ವೆಲ್ ಕೊರೆದು ನೀರು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬೆಳ್ತಂಗಡಿ, ಮಂಗಳೂರು ಸೇರಿದಂತೆ ನೀರಿನ ಸಮಸ್ಯೆ ಇರುವಲ್ಲಿ ಭೂ ವಿಜ್ಞಾನಿಗಳ ಸಹಕಾರ ಪಡೆದು ತುರ್ತಾಗಿ ಬೋರ್‌ವೆಲ್‌ಗಳನ್ನು ಕೊರೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಅಪೌಷ್ಠಿಕತೆ ಇಳಿಕೆ: ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ 662ರಿಂದ 650ಕ್ಕೆ ಇಳಿದಿದೆ. ಬೆಳ್ತಂಗಡಿಯಲ್ಲಿ 178, ಪುತ್ತೂರಲ್ಲಿ 123, ಮಂಗಳೂರು ಗ್ರಾಮಾಂತರದಲ್ಲಿ 103 ಮಕ್ಕಳನ್ನು ಗುರುತಿಸಿದ್ದು, ಜೂನ್‌ನಲ್ಲಿ ಆರೋಗ್ಯ ಇಲಾಖೆ ಸಹಕಾರದಲ್ಲಿ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖಾ ಅಧಿಕಾರಿ ಹೇಳಿದರು.
ಅಂಗನವಾಡಿಗೆ ವಿದ್ಯುತ್: 1615 ಅಂಗನವಾಡಿ ಪೈಕಿ 1,488 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, 127 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇದೆ. 41 ಕಡೆ ಕಂಬದ ಸಮಸ್ಯೆ ಇದ್ದು, ಉಳಿದೆಡೆ ಸ್ವಂತ ಅಂಗನವಾಡಿ ಕಟ್ಟಡಗಳಿಲ್ಲ, ದುರಸ್ತಿ ಇರುವಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಮುಂದಿನ ಕೆಡಿಪಿ ವೇಳೆಗೆ ವಿದ್ಯುತ್ ಸಂಪರ್ಕ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಮಾರುಕಟ್ಟೆ ಒದಗಿಸಿ: ಜನಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಅರ್ಜಿ ಬಂದಿಲ್ಲ ಎಂದು ಕಾರಣ ನೀಡಬಾರದು ಎಂದು ಅಧ್ಯಕ್ಷರು, ಪರಿಶಿಷ್ಟ ಜಾತಿಯವರು ಸಂಗ್ರಹಿಸುವ ಸೀಗೆಪುಡಿ, ಜೇನು ಹಾಗೂ ಬುಟ್ಟಿಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
  ಸಭೆಯಲ್ಲಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಉಪ ಕಾರ್ಯದರ್ಶಿ ಶಶಿಧರ್, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕ ಸೀತಮ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement