ಜಿಲ್ಲೆಯಲ್ಲಿ ಮೊದಲ ಅಬ್ಬರ ಮಳೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ವಾರದ ಹಿಂದೆ ತುಂತುರು ಮಳೆ ಬಳಿಕ ಸೋಮವಾರ ಮೊದಲ ಬಾರಿಗೆ ರಾತ್ರಿ ಗುಡುಗು, ಸಿಡಿಲಿನ ಧಾರಾಕಾರ ಮಳೆ ಸುರಿದಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಡರಾತ್ರಿ ಮಳೆ ಸುರಿದಿದೆ. ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಮಿಂಚು, ಗುಡುಗು ಕೊನೆಗೆ ಸಿಡಿಲಿನ ಆರ್ಭಟ ಕಂಡುಬಂದಿದೆ. ನಂತರ ಮಳೆ ಧೋ ಎಂದು ಸುರಿದಿದ್ದು, ಮಂಗಳವಾರ ಮುಂಜಾನೆಗೆ ಜಿಲ್ಲೆಯಲ್ಲಿ ತಂಪಾದ ವಾತಾವರಣ ಮೇಳೈಸಿತ್ತು.
ಕೃಷಿ ಜಮೀನಿಗೆ ಕೃತಕ ನೆರೆ: ಕುತ್ತೆತ್ತೂರಿನ ಜಂತಬೆಟ್ಟು ಬಳಿಯ ಪಡ್ಡಾಯಿಬೆಟ್ಟು ಎಂಬಲ್ಲಿ ಕೃತಕ ನೆರೆ ಭೀತಿ ಎದುರಾಗಿದ್ದು, ಸುತ್ತಲಿನ ಮನೆಗಳಿಗೆ ತೊಂದರೆಯಾಗಿದೆ. ಕೃಷಿ ಜಮೀನು ಕೃತಕ ನೆರೆ ನೀರಿನಿಂದ ಹೂಳು ತುಂಬಿ ಹಾನಿಗೀಡಾಗಿದೆ. ಅಲ್ಲದೆ ಮಳೆನೀರು ಮನೆಗಳಿಗೆ ನುಗ್ಗಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಇಲ್ಲಿ ಜಮೀನು ಖರೀದಿಸಿದ್ದು, ಜಮೀನನ್ನು ಸರಿಯಾಗಿ ಸಮತಟ್ಟುಗೊಳಿಸಿಲ್ಲ. ಇದನ್ನು ಸಂಬಂಧಿತರ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡಿದ್ದಾರೆ. ಸ್ಥಳೀಯರು ಪೆರ್ಮುದೆ ಪಂಚಾಯ್ತಿಗೆ ದೂರು ನೀಡಿದ್ದಾರೆ.