ಜೂ.7ಕ್ಕೆ 'ಬೆಂಗ್ಳೂರು ಚಲೋ'
ಮಂಗಳೂರು: ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಂತ್ರಸ್ತರು ಜೂ.7ರಂದು ಬೆಂಗಳೂರು ಚಲೋ ನಡೆಸಲಿದ್ದಾರೆ. ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಮತ್ತು ಎಂಡೋ ಸಂತ್ರಸ್ತರ ವಿಧಾನಸೌಧ ಚಲೋ ಸಂಘಟನಾ ಸಮಿತಿ ಇದನ್ನು ಆಯೋಜಿಸಿದ್ದು, ಬೆಳಗ್ಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಭೆ ನಡೆಸಲಿದೆ. ಅಲ್ಲಿಗೆ ಮುಖ್ಯಮಂತ್ರಿ ಸಚಿವ ಸಂಪುಟ ಸದಸ್ಯರೊಂದಿಗೆ ಆಗಮಿಸಿ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಿದ್ದೇವೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಂಡೋ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಈವರೆಗೆ ಕಾರ್ಡ್, ಎಸ್ಎಂಎಸ್ ಚಳುವಳಿ, ಪ್ರತಿಭಟನೆ ನಡೆಸಲಾಗಿದೆ. ಎಂಡೋ ಸಂತ್ರಸ್ತರ ಛಾಯಾ ಚಿತ್ರೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗ ಸಂತ್ರಸ್ತರಲ್ಲಿ ಸಮಸ್ಯೆ ಉಲ್ಭಣಗೊಂಡಿರುವುದರಿಂದ ಅನಿವಾರ್ಯವಾಗಿ ಹೋರಾಟ ಕೈಗೆತ್ತಿಕೊಳ್ಳಲಾಗಿದೆ ಎಂದರು.